ನವದೆಹಲಿ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸ್ಥಳ ಬದಲಾವಣೆಯನ್ನು ಬಿಸಿಸಿಐ ಸೋಮವಾರ ಪ್ರಕಟಿಸಿದ್ದು, ಸರಣಿಯ ಮೂರನೇ ಪಂದ್ಯ ಮಾರ್ಚ್ 1 ರಂದ 5ರ ವರೆಗೆ ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಕಳಪೆ ಔಟ್‌ಫೀಲ್ಡ್ ಪರಿಸ್ಥಿತಿಯಿಂದಾಗಿ ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಟ್ವಿಟ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬಿಸಿಸಿಐ ಕ್ಯುರೇಟರ್ ತಪೋಶ್ ಚಟರ್ಜಿ ಅವರ ವರದಿಯು ಔಟ್‌ಫೀಲ್ಡ್ ಅಂತಾರಾಷ್ಟ್ರೀಯ ಪಂದ್ಯಕ್ಕೆ ಅನರ್ಹವೆಂದು ಪರಿಗಣಿಸಿದ ಹಿನ್ನೆಲೆ ಪಂದ್ಯವನ್ನು ಇಂದೋರ್ನಲ್ಲಿ ಮಾಡಲು ನಿರ್ಧರಿಸಲಾಗಿದೆ.
"ಮಾಸ್ಟರ್ ಕಾರ್ಡ್ ಪ್ರಯೋಜಕತ್ವದ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೂರನೇ ಪಂದ್ಯವನ್ನು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆಡಲು ನಿರ್ಧರಿಸಲಾಗಿತ್ತು. ಆದರೆ, ಔಟ್‌ಫೀಲ್ಡ್ ಸಾಕಷ್ಟು ಹುಲ್ಲಿನ ಸಾಂದ್ರತೆಯನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಹೆಚ್ಚಿನ ದಿನ ಬೇಕಾದ್ದರಿಂದ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ " ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
2017 ರಲ್ಲಿ ಧರ್ಮಶಾಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಆಯೋಜಿಸಲಾಗಿತ್ತು. ಅಂದೂ ಕೂಡ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯ ನಡೆದಿತ್ತು. ಉಭಯ ದೇಶಗಳ ನಡುವಿನ 2016/17 ಸರಣಿಯ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು. ಆ ಗೆಲುವಿನೊಂದಿಗೆ ಭಾರತ 2-1 ಅಂತರದಲ್ಲಿ ಸರಣಿಯನ್ನು ಗೆದ್ದು ಮತ್ತೆ ಬಾರ್ಡರ್ ಗವಾಸ್ಕರ್ ಟ್ರೋಫಿ ತೆಕ್ಕೆಗೆ ತೆಗೆದುಕೊಂಡಿತ್ತು.