ಬೆಂಗಳೂರು:ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ ಪ್ರಯಾಣಿಸುವ ಕುರಿತ ವಿವಾದದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್ ಬಿನ್ನಿ ಪ್ರತಿಕ್ರಿಯಿಸಿದ್ದು, ನಾವೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಕೇಂದ್ರ ಸರ್ಕಾರದ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ತಂಡದ ಪ್ರಯಾಣಿಸುವ ಬಗ್ಗೆ ನಾವು ಮಾತ್ರ (ಬಿಸಿಸಿಐ) ನಿರ್ಧರಿಸಲು ಸಾಧ್ಯವಿಲ್ಲ. ಎಲ್ಲಿಗೆ ತಂಡ ಪ್ರಯಾಣಿಸಬೇಕೆಂದೂ ನಾವು ಹೇಳಲಾಗದು. ಇದಕ್ಕೆ ನಾವು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ನಾವು ಬೇರೆ ರಾಷ್ಟ್ರಕ್ಕೆ ತೆರಳಬೇಕಾದರೂ ಹಾಗೂ ಬೇರೆ ರಾಷ್ಟ್ರಗಳು ಇಲ್ಲಿಗೆ ಬರಬೇಕಾದರೂ ಸರ್ಕಾರದ ಅನುಮತಿ ಅಗತ್ಯ. ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾದ ಪ್ರಯಾಣದ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಅವಶ್ಯವಾಗಿದೆ ಎಂದು ಬಿನ್ನಿ ಒತ್ತಿ ಹೇಳಿದರು.