ಮುಂಬೈ :ದೇಶದಲ್ಲಿ ಕೋವಿಡ್ ಹಿನ್ನೆಲೆ ಮುಂಬರುವ 2021-22ರ ಋತುವಿನ ರಣಜಿ ಟ್ರೋಫಿ, ಕರ್ನಲ್ ಸಿಕೆ ನಾಯ್ಡು ಟ್ರೋಫಿ ಮತ್ತು ಮಹಿಳಾ ಟಿ20 ಲೀಗ್ ಅನ್ನು ಮುಂದೂಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ಕಳೆದ ಋತುವಿನ ರಣಜಿ ಟ್ರೋಫಿ ಕೂಡ ಕೋವಿಡ್ನಿಂದ ರದ್ದುಗೊಂಡಿತ್ತು. ಆದರೆ, ಈ ಬಾರಿ ಜನವರಿಯಿಂದ ಟೂರ್ನಿ ಪ್ರಾರಂಭವಾಗಬೇಕಿತ್ತು. ಮುಂಬೈ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್ ಮತ್ತು ತಿರುವನಂತಪುರಂ ಸೇರಿ ಆರು ನಗರಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದವು. ಸಿಕೆ ನಾಯ್ಡು ಟ್ರೋಫಿ ಕೂಡ ಇದೇ ತಿಂಗಳು ಹಾಗೂ ಮಹಿಳಾ ಟಿ20 ಲೀಗ್ ಫೆಬ್ರವರಿಯಲ್ಲಿ ಆರಂಭವಾಗಬೇಕಿತ್ತು.
ಭಾರತೀಯ ಕ್ರಿಕೆಟ್ ಮಂಡಳಿಯು ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಯನ್ನು ಕೋವಿಡ್ ಹೆಚ್ಚಳಕ್ಕೂ ಮುನ್ನವೇ ಯಶಸ್ವಿಯಾಗಿ ನಡೆಸಿದೆ.
ಆಟಗಾರರು, ಸಹಾಯಕ ಸಿಬ್ಬಂದಿ, ಪಂದ್ಯದ ಅಧಿಕಾರಿಗಳು ಮತ್ತು ಇತರ ಭಾಗವಹಿಸುವವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿಸಿಸಿಐ ಹೇಳಿದೆ.
ಅಂಡರ್-16 ವಿಜಯ್ ಮರ್ಚೆಂಟ್ ಟ್ರೋಫಿಯನ್ನು ಕೂಡ ಕಳೆದ ವಾರವೇ ಮುಂದೂಡಲಾಗಿದೆ. ದೇಶದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣ ಮತ್ತು ಒಮಿಕ್ರಾನ್ ರೂಪಾಂತರದ ಭೀತಿ ಕ್ರಿಕೆಟ್ ಟೂರ್ನಿಗಳ ಮೇಲೆ ಪರಿಣಾಮ ಬೀರುತ್ತಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58,097 ಹೊಸ ಸೋಂಕಿತರು ಪತ್ತೆಯಾಗಿದ್ದು, 534 ಸಾವು ದಾಖಲಾಗಿವೆ. ನಿನ್ನೆಗಿಂತ ಇಂದು ಪ್ರಕರಣಗಳ ಸಂಖ್ಯೆಯು ಶೇ.55ರಷ್ಟು ಹೆಚ್ಚಾಗಿದೆ. ದೇಶದಲ್ಲಿ ಈಗ 2.14 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಒಮಿಕ್ರಾನ್ ಸಂಖ್ಯೆ ಕೂಡ 2,135ನ್ನು ದಾಟಿದೆ.
ಇದನ್ನೂ ಓದಿ:Ind Vs Sa: 'ಅತ್ಯುತ್ತಮ ಪ್ರದರ್ಶನ ಇನ್ನೂ ಬರಬೇಕಿದೆ'... 7 ವಿಕೆಟ್ ಪಡೆದು ದಾಖಲೆ ಬರೆದ ಠಾಕೂರ್ ಪ್ರತಿಕ್ರಿಯೆ