ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಆತಿಥ್ಯ ತಪ್ಪಿಸಿಕೊಂಡ ಮೈದಾನಗಳಲ್ಲಿ ದ್ವಿಪಕ್ಷೀಯ ಸರಣಿ: ಅಸಮಾಧಾನ ಶಮನಕ್ಕೆ ಬಿಸಿಸಿಐ ಪ್ಲಾನ್​ - ವಿಶ್ವಕಪ್​ ಪಂದ್ಯಗಳ ಆಯೋಜನೆ ವಂಚಿತ ಮೈದಾನಗಳು

ವಿಶ್ವಕಪ್​ ಪಂದ್ಯಗಳ ಆಯೋಜನೆಯಿಂದ ವಂಚಿತವಾದ ಕ್ರಿಕೆಟ್​ ಮೈದಾನಗಳಲ್ಲಿ ಮುಂದೆ ನಡೆಯುವ ದ್ವಿಪಕ್ಷೀಯ ಸರಣಿಗಳ ಪಂದ್ಯಗಳನ್ನು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಈ ಮೂಲಕ ಅಸಮಾಧಾನ ಶಮನಕ್ಕೆ ಮುಂದಾಗಿದೆ.

ವಿಶ್ವಕಪ್​ ಆತಿಥ್ಯ ತಪ್ಪಿಸಿಕೊಂಡ ಮೈದಾನಗಳಲ್ಲಿ ದ್ವಿಪಕ್ಷೀಯ ಸರಣಿ
ವಿಶ್ವಕಪ್​ ಆತಿಥ್ಯ ತಪ್ಪಿಸಿಕೊಂಡ ಮೈದಾನಗಳಲ್ಲಿ ದ್ವಿಪಕ್ಷೀಯ ಸರಣಿ

By

Published : Jul 26, 2023, 5:50 PM IST

ನವದೆಹಲಿ:2023 ರ ವಿಶ್ವಕಪ್​ ಟೂರ್ನಿ ಅಕ್ಟೋಬರ್​ 5 ರಿಂದ ಆರಂಭವಾಗಲಿದ್ದು, ನವೆಂಬರ್​ 19 ರಂದು ಫೈನಲ್​ ನಡೆಯಲಿದೆ. ಹೈದರಾಬಾದ್​, ಬೆಂಗಳೂರು, ಅಹಮದಾಬಾದ್​ ಸೇರಿದಂತೆ ಒಟ್ಟು 10 ಮೈದಾನಗಳಲ್ಲಿ ಪಂದ್ಯ ನಡೆಯಲಿದೆ. ಇದೇ ವೇಳೆ, ತಮಗೆ ವಿಶ್ವಕಪ್​ನ ಒಂದು ಪಂದ್ಯಕ್ಕೂ ಆತಿಥ್ಯ ನೀಡಿಲ್ಲ ಎಂದು ಹಲವು ರಾಜ್ಯಗಳ ಕ್ರಿಕೆಟ್​ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಶಮನಕ್ಕಾಗಿ ಬಿಸಿಸಿಐ ಹೊಸ ಪ್ಲಾನ್​ ಮಾಡಿದೆ.

ಅದೇನೆಂದರೆ, 2023-24 ರ ಅವಧಿಯಲ್ಲಿ ಭಾರತ ತಂಡ ತವರಿನಲ್ಲಿ ಆಡುವ ಸರಣಿಗಳನ್ನು ವಿಶ್ವಕಪ್​ ಪಂದ್ಯಗಳಿಂದ ವಂಚಿತವಾಗಿರುವ ಮೈದಾನಗಳಿಗೆ ಹೆಚ್ಚಿನ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ವಿಶ್ವಕಪ್​​ಗೂ ಮೊದಲು ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸ ಮಾಡಲಿದ್ದು, ಮೂರು ಏಕದಿನ ಮತ್ತು 5 ಟಿ 20 ಪಂದ್ಯಗಳನ್ನಾಡಲಿದೆ. ಅಫ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯಗಳ ಸರಣಿ, 2024 ರಲ್ಲಿ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಈ ಸರಣಿಗಳ ಪಂದ್ಯಗಳನ್ನು ವಿಶ್ವಕಪ್​ನಿಂದ ವಂಚಿತವಾಗಿರುವ ಮೊಹಾಲಿ, ಇಂದೋರ್, ರಾಜ್‌ಕೋಟ್ ಮತ್ತು ವಿಶಾಖಪಟ್ಟಣಂನಲ್ಲಿ ಹೆಚ್ಚುವರಿಯಾಗಿ ತಲಾ ಎರಡು ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಇವುಗಳ ಜೊತೆಗೆ ತಿರುವನಂತಪುರಂ, ಗುವಾಹಟಿ, ನಾಗ್ಪುರ ಮತ್ತು ರಾಂಚಿ ಕೂಡ ದ್ವಿಪಕ್ಷೀಯ ಸರಣಿಯ ಆತಿಥ್ಯ ವಹಿಸಲಿವೆ.

ವಿಶ್ವಕಪ್​ ಪಂದ್ಯಗಳ ಆತಿಥ್ಯ ವಹಿಸಿರುವ ಮೈದಾನಗಳ ಪೈಕಿ ಹೈದರಾಬಾದ್​, ಬೆಂಗಳೂರು, ಧರ್ಮಶಾಲಾಗಳು ದ್ವಿಪಕ್ಷೀಯ ಸರಣಿ ಆಯೋಜನೆಗೆ ಅವಕಾಶ ಪಡೆದಿವೆ. ಇದರಲ್ಲಿ ಹೈದರಾಬಾದ್​ನಲ್ಲಿ ಆಸ್ಟ್ರೇಲಿಯಾ ಎದುರಿನ ಟಿ20, ಇಂಗ್ಲೆಂಡ್​ನ ಟೆಸ್ಟ್​ ನಡೆದರೆ, ಬೆಂಗಳೂರಿನಲ್ಲಿ ಅಫ್ಘಾನಿಸ್ತಾನದೊಂದಿಗಿನ ಟಿ20 ಪಂದ್ಯ ಹಾಗೂ ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ನಡೆಯಲಿದೆ.

ಬಿಸಿಸಿಐ ಈಗಾಗಲೇ ಘೋಷಿಸಿದಂತೆ ಇಂಗ್ಲೆಂಡ್ ಎದುರಿನ ಟೆಸ್ಟ್​ ಸರಣಿಯನ್ನು ಐದು ದೊಡ್ಡ ನಗರಗಳಾದ ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಬೆಂಗಳೂರು ಮೈದಾನದಲ್ಲಿ ಆಯೋಜಿಸಲಾಗಿತ್ತು. ಆದರೆ, ಅವುಗಳ ಬದಲಿಗೆ ಹೈದರಾಬಾದ್, ವಿಶಾಖಪಟ್ಟಣಂ, ರಾಜ್‌ಕೋಟ್, ರಾಂಚಿ ಮತ್ತು ಧರ್ಮಶಾಲಾ ಮೈದಾನಗಳಿಗೆ ಟೆಸ್ಟ್​ ಪಂದ್ಯಗಳನ್ನು ವರ್ಗ ಮಾಡಲಾಗಿದೆ. ಈ ಎಲ್ಲ ಮೈದಾನಗಳಲ್ಲಿ ಇದುವರೆಗೆ ಐದು ಅಥವಾ ಅದಕ್ಕಿಂತಲೂ ಕಡಿಮೆ ಟೆಸ್ಟ್ ಪಂದ್ಯಗಳು ನಡೆದಿವೆ.

ಬಿಡುವಿಲ್ಲದ ವೇಳಾಪಟ್ಟಿ:ಭಾರತ ತಂಡ 2023-24 ರ ಅವಧಿಯಲ್ಲಿ ಬಿಡುವಿಲ್ಲದ ಸರಣಿಗಳಲ್ಲಿ ಭಾಗವಹಿಸಲಿದೆ. ಆಸ್ಟ್ರೇಲಿಯಾ ಏಕದಿನ ಸರಣಿ, ವಿಶ್ವಕಪ್​, ಅಫ್ಘನ್​ ಎದುರು ಟಿ20 ಸರಣಿ, ಏಷ್ಯಾಕಪ್​, ಇಂಗ್ಲೆಂಡ್​ ವಿರುದ್ಧ 5 ಟೆಸ್ಟ್​, ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸ ನಡೆಸಲಿದೆ.

ವಿಶ್ವಕಪ್​ಗೂ ಮೊದಲು ಭಾರತ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆಡುವ ಮೂಲಕ ತವರಿನ ಅಭಿಯಾನ ಆರಂಭಿಸಲಿದೆ. ಇತ್ತಂಡಗಳ ನಡುವಿನ ಸರಣಿ ಸೆಪ್ಟೆಂಬರ್ 22 ರಿಂದ 27 ರವರೆಗೆ ನಡೆಯಲಿದೆ. ಇದರೊಂದಿಗೆ, ಆಫ್ಘನ್​ ವಿರುದ್ಧದ ಟಿ 20 ಸರಣಿಯು ವಿಶ್ವಕಪ್ ಫೈನಲ್‌ ಮುಗಿದ 4 ದಿನಗಳ ನಂತರ ಅಂದರೆ, ನವೆಂಬರ್ 23 ರಂದು ಪ್ರಾರಂಭವಾಗಿ, ಡಿಸೆಂಬರ್ 3 ರವರೆಗೆ ನಡೆಯಲಿದೆ.

ಇದರ ನಂತರ, ಮೂರು ಟಿ20 (ಡಿಸೆಂಬರ್ 10 ರಿಂದ 14), ಮೂರು ಏಕದಿನ (ಡಿಸೆಂಬರ್ 17 ರಿಂದ 21) ಮತ್ತು 2 ಟೆಸ್ಟ್ (ಡಿಸೆಂಬರ್ 26-30 ಮತ್ತು ಜನವರಿ 3-7) ಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಬೇಕಾಗಿದೆ. ಮೂರು ದಿನಗಳ ಬಳಿಕ ಜನವರಿ 11 ರಿಂದ 17 ರವರೆಗೆ ಅಫ್ಘಾನಿಸ್ತಾನ ವಿರುದ್ಧದ ಸ್ವದೇಶಿ ಟಿ 20 ಸರಣಿಯ ಆರಂಭವಾಗಲಿದೆ. ಇದು ಭಾರತದ ವಿರುದ್ಧ ಅಫ್ಘಾನಿಸ್ತಾನದ ಮೊದಲ ವೈಟ್ ಬಾಲ್ ದ್ವಿಪಕ್ಷೀಯ ಸರಣಿಯಾಗಿದೆ. ಇದಾದ ನಂತರ ಇಂಗ್ಲೆಂಡ್​ ವಿರುದ್ಧ 5 ಟೆಸ್ಟ್​ ಪಂದ್ಯಗಳ ಸರಣಿ ನಡೆಯಲಿದೆ.

ವಿಶ್ವಕಪ್​ ಪಂದ್ಯ ಆಯೋಜಿಸುವ ಮೈದಾನಗಳು:2023 ರ ಏಕದಿನ ವಿಶ್ವಕಪ್​ ಪಂದ್ಯಗಳು ಒಟ್ಟು 10 ಮೈದಾನಗಳಲ್ಲಿ ನಡೆಯಲಿವೆ. ಹೈದರಾಬಾದ್​, ಧರ್ಮಶಾಲಾ, ಅಹಮದಾಬಾದ್​, ದಿಲ್ಲಿ, ಚೆನ್ನೈ, ಲಖನೌ, ಪುಣೆ, ಬೆಂಗಳೂರು, ಮುಂಬೈ ಹಾಗೂ ಕೋಲ್ಕತ್ತಾ ಮೈದಾನಗಳು ಆತಿಥ್ಯ ವಹಿಸಲಿವೆ. ಸೆಪ್ಟೆಂಬರ್​ 29 ರಿಂದ ಅಕ್ಟೋಬರ್​ 3 ರ ವರೆಗೆ ಹೈದರಾಬಾದ್​, ಗುವಾಹಟಿ ಮತ್ತು ತಿರುವನಂತಪುರದಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ.

ಇದನ್ನೂ ಓದಿ:ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ರ‍್ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕೆ ಕುಸಿದ ಟೀಂ ಇಂಡಿಯಾ

ABOUT THE AUTHOR

...view details