ಮುಂಬೈ: ಸಂದರ್ಶನ ನೀಡದ ಕಾರಣಕ್ಕೆ ಭಾರತ ತಂಡದ ಹಿರಿಯ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ ಅವರಿಗೆ ಬೆದರಿಕೆ ಹಾಕಿದ್ದ ಆರೋಪದಲ್ಲಿ ಪತ್ರಕರ್ತ ಬೋರಿಯಾ ಮಜುಂದಾರ್ ತಪ್ಪಿತಸ್ಥ ಎಂದು ತನಿಖಾ ಸಮಿತಿಯಿಂದ ಖಚಿತವಾಗಿರುವುದರಿಂದ, ಬಿಸಿಸಿಐ 2 ವರ್ಷಗಳ ಕಾಲ ಅವರನ್ನು ನಿಷೇಧಿಸಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಘೋಷಿಸಿದ ವೇಳೆ ಸಹಾರನ್ನು ಆಯ್ಕೆ ಸಮಿತಿ ತಂಡದಿಂದ ಕೈಬಿಟ್ಟಿತ್ತು. ಈ ವೇಳೆ, ಮಜುಂದಾರ್ ಸಂದರ್ಶನಕ್ಕಾಗಿ ಸಹಾ ಅವರಿಗೆ ವಾಟ್ಸ್ಆ್ಯಪ್ ಮೂಲಕ ಕೇಳಿಕೊಂಡಿದ್ದರು. ಅಲ್ಲದೇ ಮೊದಲು ತಮಗೇ ಸಂದರ್ಶನ ನೀಡಬೇಕೆಂದು ತಾಕೀತು ಕೂಡ ಮಾಡಿದ್ದರು. ಆದರೆ, ಸಂದರ್ಶನಕ್ಕೆ ನಿರಾಕರಿಸಿದ್ದಕ್ಕೆ ಮಜುಂದಾರ್ ಸಹಾ ವಿರುದ್ಧ ಕಟುವಾದ ಮಾತುಗಳನ್ನ ಆಡಿದ್ದಲ್ಲದೆ, ಇದಕ್ಕೆ ಪರಿಣಾಮ ಎದುರಿಸುತ್ತೀರಾ ಎಂದು ಬೆದರಿಕೆಯೊಡ್ಡಿದ್ದರು.
ಈ ಸಂದೇಶಗಳನ್ನು ಸಹಾ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ಕ್ರಿಕೆಟ್ ವಯಲದಲ್ಲಿ ಭಾರಿ ಚರ್ಚೆಗೆ ಒಳಗಾಗಿತ್ತು. ಕೆಲವು ಮಾಜಿ ಆಟಗಾರರು ಕೂಡ ಸಹಾ ಬೆನ್ನಿಗೆ ನಿಂತು ಪತ್ರಕರ್ತನ ವಿರುದ್ಧ ಹರಿಹಾಯ್ದಿದ್ದರು. ಕೊನೆಗೆ ಬಿಸಿಸಿಐ ತನಿಖಾ ಸಮಿತಿ ನೇಮಿಸಿ ವಿಚಾರಣೆ ನಡೆಸಿತ್ತು. ಇದೀಗ ಮಜುಂದಾರ್ ತಪ್ಪಿತಸ್ಥ ಎಂದು ಕಂಡ ಬಂದಮೇಲೆ ಅವರನ್ನು 2 ವರ್ಷ ನಿಷೇಧಿಸಿದೆ.
ವೃದ್ಧಿಮಾನ್ ಸಹಾಗೆ ಬೆದರಿಕೆ ಹಾಕಿದ ಮಜುಂದಾರ್ ಸಹಾಗೆ 2 ವರ್ಷ ನಿಷೇಧ ಈ ಎರಡು ವರ್ಷಗಳ ಕಾಲ ಮಜುಂದಾರ್ ಯಾವುದೇ ಬಿಸಿಸಿಐ ವ್ಯಾಪ್ತಿಯ ಕ್ರೀಡಾಂಗಣಗಳ ಒಳಗೆ ಪ್ರವೇಶಿಸಲು ಅನುಮತಿಸಬಾರದು ಎಂದು ಭಾರತೀಯ ಕ್ರಿಕೆಟ್ ಮಂಡಳಿಯ ಎಲ್ಲಾ ರಾಜ್ಯ ಘಟಕಗಳಿಗೆ ಮಾಹಿತಿ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಜುಂದಾರ್ಗೆ ಎಲ್ಲೆಲ್ಲಿ ನಿಷೇಧ
- ಎರಡು ವರ್ಷಗಳ ಕಾಲ ತವರಿನಲ್ಲಿ ನಡೆಯಲಿರುವ ಡೊಮೆಸ್ಟಿಕ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮಾಧ್ಯಮ ಮಾನ್ಯತೆ ನೀಡಲಾಗುವುದಿಲ್ಲ
- ಎರಡು ವರ್ಷಗಳ ಕಾಲ ಭಾರತದಲ್ಲಿ ನೋಂದಣಿಯಾಗಿರುವ ಯಾವುದೇ ಕ್ರಿಕೆಟಿಗರನ್ನು ಸಂದರ್ಶನ ಮಾಡಲು ಅವಕಾಶವಿಲ್ಲ.
- ಎರಡು ವರ್ಷಗಳ ಕಾಲ ಬಿಸಿಸಿಐ ಮತ್ತು ಇತರ ಸದಸ್ಯರ ಸಂಘದ ಒಡೆತನದಲ್ಲಿ ಸಿಗುವ ಎಲ್ಲ ಸೌಲಭ್ಯಗಳಿಂದಲೂ ಎರಡು ವರ್ಷಗಳ ನಿಷೇಧ