ಚೆನ್ನೈ (ತಮಿಳುನಾಡು):ಭಾರತ ತಂಡ ತನ್ನ ಆಕಾಶ ನೀಲಿ ಬಣ್ಣದ ಜರ್ಸಿಯಲ್ಲಿ ಆರಂಭದಿಂದಲೂ ಆಡುತ್ತಾ ಬಂದಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಜರ್ಸಿ ಬದಲಾವಣೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಅದರಲ್ಲೂ ಅಕ್ಟೋಬರ್ 14 ರಂದು ಪಾಕಿಸ್ತಾನದ ವಿರುದ್ಧ ನಡೆಯುವ ಪಂದ್ಯಕ್ಕೆ ಭಾರತ ತಂಡ ಬೇರೆ ಜರ್ಸಿಯಲ್ಲಿ ಆಡಲಿದೆ ಎಂದು ಹೇಳಲಾಗುತ್ತಿದೆ.
ವಿಶ್ವಕಪ್ನ ಅಭ್ಯಾಸಕ್ಕೆ ಈ ಬಾರಿ ಹೊಸ ಕಿಟ್ ಕೊಡಲಾಗಿದ್ದು, ಅದರ ಬಣ್ಣ ಬೇರೆ ಇರುವುದು ಈ ಚರ್ಚೆಗೆ ಮೂಲ ಕಾರಣ ಎಂದು ಹೇಳಬಹುದು. ವಿಶ್ವಕಪ್ನ ನೆಟ್ ಪ್ರಾಕ್ಟೀಸ್ಗೆ ಕೇಸರಿ ಬಣ್ಣದ ಕಿಟ್ನ್ನು ಅಡಿಡಾಸ್ ನೀಡಿದೆ. ಹೀಗಾಗಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಇದೇ ಬಣ್ಣದ ಜರ್ಸಿಯಲ್ಲಿ ಟೀಮ್ ಇಂಡಿಯಾ ಕಾಣಿಸಿಕೊಳ್ಳಲಿದೆ ಎಂಬುದು ಕೆಲ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿ.
ಆದರೆ ಈ ಊಹಾಪೋಹಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೌರವ ಖಜಾಂಚಿ ಆಶಿಶ್ ಶೆಲಾರ್ ತೆರೆ ಎಳೆದಿದ್ದಾರೆ. ಭಾರತವು ತಂಡ ಪರ್ಯಾಯ ಪಂದ್ಯದ ಕಿಟ್ ಅನ್ನು ಧರಿಸುವುದಿಲ್ಲ ಎಂದು ತಿಳಿಸಿದ್ದಾರೆ. "ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಪಂದ್ಯಕ್ಕೆ ಪರ್ಯಾಯ ಪಂದ್ಯದ ಕಿಟ್ ಧರಿಸಲಿದೆ ಎಂಬ ಮಾಧ್ಯಮ ವರದಿಗಳನ್ನು ನಾವು ಸ್ಪಷ್ಟವಾಗಿ ತಳ್ಳಿಹಾಕುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಮತ್ತು ಯಾರೊಬ್ಬರ ಕಲ್ಪನೆ ಆಗಿದೆ. 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಮೆನ್ ಇನ್ ಬ್ಲೂ ಭಾರತದ ಬಣ್ಣಗಳನ್ನು ಆಡುತ್ತಾರೆ" ಅವರು ತಿಳಿಸಿದ್ದಾರೆ.