ನವದೆಹಲಿ:ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಚೇತನ್ ಶರ್ಮಾ ಖಾಸಗಿ ಸುದ್ದಿವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕ್ರಿಕೆಟಿಗರು ಮತ್ತು ಬಿಸಿಸಿಐ ಬಗ್ಗೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗವಾಗಿವೆ. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದು, ಈಚೆಗಷ್ಟೇ ಆಯ್ಕೆ ಸಮಿತಿಗೆ ಮರು ಆಯ್ಕೆಯಾಗಿದ್ದ ಚೇತನ್ ಶರ್ಮಾ ಭವಿಷ್ಯವೂ ಡೋಲಾಯಮಾನವಾಗಿದೆ.
ಭಾರತ ತಂಡದ ಆಟಗಾರರ ಮಧ್ಯೆ ಮನಸ್ತಾಪ, ಅವರ ದೈಹಿಕ ಸಾಮರ್ಥ್ಯ, ಫಿಟ್ ಇಲ್ಲದಿದ್ದರೂ ಹೇಗೆ ಆಯ್ಕೆಯಾಗುತ್ತಾರೆ, ತಂಡದಲ್ಲಿನ ಬಣಗಳು ಸೇರಿದಂತೆ ವಿವಿಧ ಮಾಹಿತಿ ಸ್ಟಿಂಗ್ ಆಪರೇಷನ್ ಮೂಲಕ ಹೊರಬಿದ್ದಿದೆ. ಆಟಗಾರರು ಫಿಟ್ನೆಸ್ಗಾಗಿ ಬೇರೆ ಮಾರ್ಗ ಹಿಡಿಯುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕ್ರೀಡಾಪಟುಗಳಿಗೆ ಫಿಟ್ನೆಸ್ ಬಹಳ ಮುಖ್ಯ. ಅದನ್ನು ಕಾಪಾಡಿಕೊಳ್ಳಲು ಮಾಡುವ ಕಸರತ್ತು ಒಂದೆರಡಲ್ಲ. ಆದರೆ, ಕ್ರಿಕೆಟ್ ಆಟಗಾರರು ಉದ್ದೀಪನ ಮದ್ದು ಹಾಕಿಕೊಳ್ಳುವ ಮೂಲಕ ಫಿಟ್ನೆಸ್ ಪಾಸ್ ಆಗಿ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಇದು ಗೊತ್ತಿದ್ದರೂ ಯಾರೂ ಏನೂ ಮಾಡುತ್ತಿಲ್ಲ ಎಂದಿರುವುದು ಸ್ಟಿಂಗ್ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.
ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನುನೋವಿನಿಂದ ಬಳಲುತ್ತಿದ್ದು ಹಲವು ತಿಂಗಳಿಂದ ಕ್ರಿಕೆಟ್ನಿಂದ ದೂರವಿದ್ದಾರೆ. ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಸರಣಿ ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನೂ ಕಳೆದುಕೊಳ್ಳುವ ಸಾಧ್ಯತೆಯಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಕಿತ್ತಾಟವಿರುವುದಾಗಿ ಶರ್ಮಾ ಹೇಳಿರುವುದು ವಿಡಿಯೋದಲ್ಲಿದೆ.
ರಾಷ್ಟ್ರೀಯ ಆಯ್ಕೆದಾರರು ತಂಡದ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ಒಪ್ಪಂದವಿರುತ್ತದೆ. ಆದರೆ, ಅದನ್ನು ಮೀರಿರುವ ಚೇತನ್ ಶರ್ಮಾ ಅವರ ಭವಿಷ್ಯ ಏನಾಗಬಹುದು ಎಂಬುದು ಪ್ರಶ್ನೆಯಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮರು ಆಯ್ಕೆಯಾಗಿದ್ದ ಚೇತನ್ ಶರ್ಮಾ:ಭಾರತ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಈಚೆಗಷ್ಟೇ ಮರು ಆಯ್ಕೆಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಬಳಿಕ ಆಯ್ಕೆ ಸಮಿತಿಯನ್ನೇ ವಿಸರ್ಜಿಸಲಾಗಿತ್ತು. ಬಳಿಕ ಅರ್ಜಿ ಆಹ್ವಾನಿಸಿದ್ದ ಬಿಸಿಸಿಐ ಚೇತನ್ ಶರ್ಮಾರನ್ನು ಮತ್ತೆ ಮುಖ್ಯಸ್ಥರನ್ನಾಗಿ ಮಾಡಿ, ಸಮಿತಿ ರಚಿಸಿತ್ತು.
ಓದಿ:ಹೆಚ್ಚು ಮೊತ್ತಕ್ಕೆ ಖರೀದಿಯಾದ ಸ್ಮೃತಿ ಮಂಧಾನ: ಟ್ವಿಟರ್ನಲ್ಲಿ ಬಾಬರ್ ಅಜಮ್ ಟ್ರೋಲ್ ಆಗಿದ್ಯಾಕೆ?