ನವದೆಹಲಿ:ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿ ಸೇರಿದಂತೆ ಭಾರತದಲ್ಲಿ ಆಯೋಜನೆಯಾಗಲಿರುವ ಮುಂಬರುವ ಕ್ರಿಕೆಟ್ ಸರಣಿಗಳ ಕುರಿತು ಚರ್ಚಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇ 29 ರಂದು ವಿಶೇಷ ಮಹಾಸಭೆ ನಡೆಸಲು ಮುಂದಾಗಿದೆ.
ನಾಲ್ಕು ಫ್ರಾಂಚೈಸಿಗಳ ಆಟಗಾರರು ಮತ್ತು ಸಿಬ್ಬಂದಿ ವರ್ಗಕ್ಕೆ ಕೊರೊನಾ ವಕ್ಕರಿಸಿದ ಪರಿಣಾಮ ಈ ಬಾರಿಯ ಐಪಿಎಲ್ ಟೂರ್ನಿಯನ್ನು ರದ್ದುಗೊಳಿಸಿ ಅನಿವಾರ್ಯವಾಗಿ ಮುಂದೂಡಲಾಯಿತು. ಐಪಿಎಲ್ 2021 ಟೂರ್ನಿಯಲ್ಲಿ ಬಾಕಿ ಉಳಿದಿರುವ 31 ಪಂದ್ಯಗಳ ಆಯೋಜನೆ ಬಗ್ಗೆಯೂ ಈ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಾಧ್ಯತೆ ಇದೆ.
ಪ್ರಮುಖವಾಗಿ ಭಾರತದ ಆತಿಥ್ಯದಲ್ಲಿ ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್ ಅವಧಿಯಲ್ಲಿ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯುವುದಿದೆ. ನಿಗದಿಯಂತೆ ಈ ಟೂರ್ನಿ ಅಕ್ಟೋಬರ್ 18ರಂದು ಆರಂಭವಾಗಬೇಕು. ಆದರೆ, ಕೊರೊನಾ ಸಂಕಷ್ಟ ಸ್ಥಿತಿ ಹೀಗೆ ಮುಂದುವರಿದರೆ ಈ ಟೂರ್ನಿಯ ಆತಿಥ್ಯ ಭಾರತದ ಕೈ ತಪ್ಪುವ ಸಾಧ್ಯತೆಯೂ ದಟ್ಟವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐನ ಕಾರ್ಯದರ್ಶಿ ಜಯ ಶಾ, ಕೊರೊನಾ ವೈರಸ್ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲಿ ಮುಂದಿನ ಕ್ರಿಕೆಟ್ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದಿದ್ದಾರೆ.
ಜೂನ್ 1ರಂದು ಬಿಸಿಸಿಐನ ವಾರ್ಷಿಕ ಸಭೆ ನಡೆಯಲಿದ್ದು, ಅದಕ್ಕೂ ಎರಡು ದಿನ ಮೊದಲೇ ಮೇ 29 ರಂದು ವಿಶೇಷ ಸಭೆ ಕರೆಯಲಾಗಿದೆ. ಮುಂದಿನ ಟೂರ್ನಿಗಳ ಆಯೋಜನೆ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲು ಈ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಭಾರತದಲ್ಲಿ ಟಿ-20 ಕ್ರಿಕೆಟ್ ವಿಶ್ವಕಪ್ ಆಯೋಜನೆ ಬಗ್ಗೆ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟು ಐಸಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಕಳೆದ ತಿಂಗಳು ನಡೆಸಲಾಗಿದ್ದ ಬಿಸಿಸಿಐನ ಉನ್ನತಾಧಿಕಾರಿಗಳ ಮಹಾಸಭೆಯಲ್ಲಿ ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲು ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲ, ಹೈದರಾಬಾದ್, ಕೋಲ್ಕತ್ತಾ, ಲಖನೌ ಮತ್ತು ಮುಂಬೈ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಈ ನಡುವೆ ರಣಜಿ ಕ್ರಿಕೆಟ್ ನಂತರ ಪ್ರಮುಖ ದೇಶಿ ಟೂರ್ನಿಗಳ ಆಯೋಜನೆ ಬಗ್ಗೆಯೂ ವಿಶೇಷ ಮಹಾಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಐಪಿಎಲ್ 2021 ಟೂರ್ನಿಯ ಉಳಿದ ಪಂದ್ಯಗಳನ್ನು ಬಿಸಿಸಿಐ ಯುಎಇ ಆತಿಥ್ಯದಲ್ಲಿ ನಡೆಸಲು ಯೋಜನೆ ರೂಪಿಸಿದೆ. ಟಿ-20 ವಿಶ್ವಕಪ್‌ಗೂ ಮುನ್ನ ಅಥವಾ ನಂತರ ಈ ಪಂದ್ಯಗಳ ಆಯೋಜನೆ ಆಗಲಿದೆ ಎಂದು ಬಿಸಿಸಿಐ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಈ ಮೊದಲು ಮಾಹಿತಿ ನೀಡಿದ್ದರು.