ಮುಂಬೈ:ಟಿ-20 ವಿಶ್ವಕಪ್ ಬಳಿಕ ಭಾರತ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ ಸೇವಾವಧಿ ಅಂತ್ಯವಾಗಲಿದೆ. ಹಾಗಾಗಿ ಈ ಸ್ಥಾನ ತುಂಬಲು ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ(BCCI) ಸಂಪರ್ಕಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಅವಧಿ ಮುಗಿಯಲಿದೆ. ಹಾಗಾಗಿ ನಾಲ್ಕು ವರ್ಷಗಳ ಹಿಂದೆ ಅಲ್ಪಾವಧಿಗೆ ಕೋಚ್ ಆಗಿದ್ದ ಕರ್ನಾಟಕದ ಲೆಜೆಂಡರಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನೇ ಮತ್ತೆ ಕೋಚ್ ಸ್ಥಾನ ಅಲಂಕರಿಸುವಂತೆ ಬಿಸಿಸಿಐ ಆಫರ್ ನೀಡಲು ಸಜ್ಜಾಗಿದೆ ಎನ್ನಲಾಗ್ತಿದೆ.
ಐಪಿಎಲ್(IPL)ನಲ್ಲಿ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದ ನಿರ್ದೇಶಕರಾಗಿರುವ ಕುಂಬ್ಳೆ 2017ರಲ್ಲಿ ಭಾರತ ತಂಡದ ಕೋಚ್ ಆಗಿದ್ದರು. ಆದರೆ ನಾಯಕ ಕೊಹ್ಲಿ ಜೊತೆಗೆ ಮನಸ್ತಾಪ ಉಂಟಾಗಿ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಮತ್ತೆ ಅನಿಲ್ ಕುಂಬ್ಳೆಯವರನ್ನು ತರಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.