ನವದೆಹಲಿ:ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕೃತವಾಗಿ ಮಹಿಳಾ ಐಪಿಎಲ್ಗೆ ಚಾಲನೆ ನೀಡಿದೆ. ಮಹಿಳಾ ಕ್ರಿಕೆಟ್ ತಂಡಗಳ ಖರೀದಿಗೆ ಫ್ರಾಂಚೈಸಿಗಳು ಬಿಡ್ ಮಾಡಿದ್ದು, ಒಟ್ಟಾರೆ ಬಿಸಿಸಿಐಗೆ 4,669 ಕೋಟಿ ರೂಪಾಯಿಗಳ ಭರ್ಜರಿ ಆದಾಯ ಬಂದಿದೆ. ಅದಾನಿ ಸ್ಪೋರ್ಟ್ಸ್ಲೈನ್ ಪ್ರೈ.ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದೆ.
ಬುಧವಾರ ಬಿಸಿಸಿಐ ಮಹಿಳಾ ಪ್ರೀಮಿಯರ್ ಲೀಗ್‌ನ ಯಶಸ್ವಿ ಬಿಡ್ಡರ್‌ಗಳನ್ನು ಪ್ರಕಟಿಸಿದೆ. ಅಹಮದಾಬಾದ್ನ ಅದಾನಿ ಸ್ಪೋರ್ಟ್ಸ್ಲೈನ್ ಪ್ರೈ.ಲಿ. - 1,289 ಕೋಟಿ ರೂ., ಮುಂಬೈನ ಇಂಡಿಯಾವಿನ್ ಸ್ಪೋರ್ಟ್ಸ್ ಪ್ರೈ.ಲಿ. - 912.99 ಕೋಟಿ ರೂ., ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈ.ಲಿ. - 901 ಕೋಟಿ ರೂ., ದೆಹಲಿಯ ಜೆಎಸ್ಬಡ್ಲ್ಯೂ ಎಂಜಿಆರ್ ಕ್ರಿಕೆಟ್ ಪ್ರೈ.ಲಿ. - 810 ಹಾಗೂ ಲಖನೌನ ಕಾಪ್ರಿ ಗ್ಲೋಬಲ್ ಹೋಲ್ಡಿಂಗ್ ಪ್ರೈ.ಲಿ. - 757 ಕೋಟಿ ರೂಪಾಯಿಗೆ ಬಿಡ್ ಹಕ್ಕು ಪಡೆದಿದೆ.
ಪುರುಷರ ದಾಖಲೆ ಮುರಿದ ಮಹಿಳಾ ಐಪಿಎಲ್: ಈ ಬಗ್ಗೆ ಟ್ವೀಟ್ ಮಾಡಿ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಇಂದು ಕ್ರಿಕೆಟ್‌ನಲ್ಲಿ ಐತಿಹಾಸಿಕ ದಿನವಾಗಿದೆ. ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನ ತಂಡಗಳ ಬಿಡ್ಡಿಂಗ್, 2008ರಲ್ಲಿ ಆರಂಭವಾದ ಪುರುಷರ ಐಪಿಎಲ್‌ನ ದಾಖಲೆಗಳನ್ನು ಮುರಿದಿದೆ. ನಾವು ಒಟ್ಟು ಬಿಡ್‌ನಲ್ಲಿ ರೂ.4,669.99 ಕೋಟಿ ಗಳಿಸಿದ್ದು, ವಿಜೇತರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಅಲ್ಲದೇ, ಇದು ಹೊಸ ಕ್ರಾಂತಿಯ ಆರಂಭವನ್ನು ಸೂಚಿಸುತ್ತದೆ. ಮಹಿಳಾ ಕ್ರಿಕೆಟ್ ಮತ್ತು ನಮ್ಮ ಮಹಿಳಾ ಕ್ರಿಕೆಟಿಗರಿಗೆ ಮಾತ್ರವಲ್ಲದೇ ಇಡೀ ಕ್ರೀಡಾ ವಲಯಕ್ಕೆ ಪರಿವರ್ತನೆಯ ಪ್ರಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಈ ಮಹಿಳಾ ಪ್ರೀಮಿಯರ್ ಲೀಗ್ ಮಹಿಳಾ ಕ್ರಿಕೆಟ್‌ನಲ್ಲಿ ಅಗತ್ಯ ಸುಧಾರಣೆಗಳನ್ನು ತರುತ್ತದೆ. ಜೊತೆಗೆ ಪ್ರತಿಯೊಬ್ಬ ಪಾಲುದಾರರಿಗೆ ಲಾಭದಾಯಕವಾದ ಪರಿಸರ ವ್ಯವಸ್ಥೆಯನ್ನೂ ಖಾತ್ರಿಪಡಿಸುತ್ತದೆ ಎಂದು ತಮ್ಮ ಜಯ್ ಶಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯು ಇದೇ ವರ್ಷದ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆ ಇದ್ದು, ಫೆಬ್ರವರಿ ಆರಂಭದಲ್ಲಿ ಮಹಿಳಾ ಕ್ರಿಕೆಟಿಗರ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ. ಪ್ರತಿ ತಂಡದಲ್ಲಿ ಏಳು ಜನ ವಿದೇಶಿ ಆಟಗಾರ್ತಿಯರಿಗೆ ಇರಲಿದ್ದಾರೆ. ಮೊದಲ ಆವೃತ್ತಿಯಲ್ಲಿ 22 ಪಂದ್ಯಗಳು ನಡೆಯಲಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿಯನ್ನು ಇನ್ನೂ ನೀಡಿಲ್ಲ.
ಪ್ರಸಾರ ಹಕ್ಕು ವಯಾಕಾಮ್ 18ಗೆ:ಈಗಾಗಲೇ ವಯಾಕಾಮ್ 18 ಸಂಸ್ಥೆ ಮಹಿಳಾ ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದೆ. 951 ಕೋಟಿ ರೂಪಾಯಿ ಬಿಡ್ ಮಾಡಿರುವ ಈ ಸಂಸ್ಥೆ ಮೊದಲ 5 ವರ್ಷ ಗುತ್ತಿಗೆ ಪ್ರಸಾರದ ಹಕ್ಕು ತನ್ನದಾಗಿಸಿಕೊಂಡಿದೆ. ಈ ಮೂಲಕ ಬಿಸಿಸಿಐ ಪ್ರತಿ ಪಂದ್ಯಕ್ಕೆ 7.10 ಕೋಟಿ ರೂಪಾಯಿ ಆದಾಯಗಳಿಸಲಿದೆ.
ಇದನ್ನೂ ಓದಿ:ಐಸಿಸಿ ವರ್ಷದ ಟಿ20 ತಂಡದಲ್ಲಿ ಕೊಹ್ಲಿ, ಸೂರ್ಯ, ಪಾಂಡ್ಯಗೆ ಸ್ಥಾನ: ಬಟ್ಲರ್ ನಾಯಕ