ಏಷ್ಯನ್ ಗೇಮ್ಸ್ 2023 ಈ ವರ್ಷದ ಕೊನೆಯಲ್ಲಿ ಚೀನಾದ ಹ್ಯಾಂಗ್‌ಝೌ ನಗರದಲ್ಲಿ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ಗೆ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡವನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ಈ ಟೂರ್ನಿಯಲ್ಲಿ ಟಿ-20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುವುದು. ಆದರೆ, ಇಲ್ಲಿ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣ ಆಗಿದೆ, ಇದನ್ನೂ ಬಿಸಿಸಿಐ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲದ ಸಂಗತಿ. ಏಕೆಂದರೆ ಈ ಏಷ್ಯನ್ ಗೇಮ್ಸ್ ಮತ್ತು ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಒಂದೇ ಸಮಯದಲ್ಲಿ ಇರುವುದರಿಂದ ತಂಡವನ್ನು ಹೇಗೆ ಹೊಂದಿಸುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಜೂನ್ 30ರ ಮೊದಲು ಆಟಗಾರರ ಪಟ್ಟಿ ಸಿದ್ಧವಾಗಲಿದೆ: ಏಕದಿನ ವಿಶ್ವಕಪ್ಗೂ ಮುನ್ನ ಬಿಸಿಸಿಐ ಪುರುಷರ ಬಿ ಕ್ರಿಕೆಟ್ ತಂಡವನ್ನು ಏಷ್ಯನ್ ಗೇಮ್ಸ್ 2023ರಲ್ಲಿ ಭಾಗವಹಿಸಲು ಕಳುಹಿಸುತ್ತದೆಯೇ ಅಥವಾ ಪರ್ಯಾಯ ಎ ಟೀಮ್ನ್ನು ಕಳಿಸುತ್ತದೆಯೇ ತಿಳಿದಿಲ್ಲ. ಆದರೆ, ಬಿಸಿಸಿಐ ಪ್ರಮುಖ ಮಹಿಳಾ ಆಟಗಾರ್ತಿಯರ ಬಲಿಷ್ಠ ತಂಡವನ್ನು ಏಷ್ಯನ್ ಗೇಮ್ಸ್‌ಗಾಗಿ ಚೀನಾಕ್ಕೆ ಕಳುಹಿಸಲಿದೆ.
ಏಷ್ಯನ್ ಗೇಮ್ಸ್ ಪಂದ್ಯಾವಳಿಯು ಚೀನಾದಲ್ಲಿ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ನಡೆಯಲಿದೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಆರಂಭವಾಗಿ ನವೆಂಬರ್ ಅಂತ್ಯದ ವರೆಗೆ ನಡೆಯಲಿದೆ. ಜೂನ್ 30ರ ಮೊದಲು ಬಿಸಿಸಿಐ ಚೀನಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಆಡಬಹುದಾದ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಲಿದೆ.