ಮುಂಬೈ: ವಿಶ್ವದಲ್ಲೇ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾದ ಬಿಸಿಸಿಐ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿರುವ ಐಪಿಎಲ್ ಕಡೆಗೆ ತನ್ನಲ್ಲೇ ಗಮನ ನೀಡುತ್ತಾ ದೇಶಾದ್ಯಂತ ಜೀವನೋಪಾಯಕ್ಕೆ ಪ್ರಥಮ ದರ್ಜೆ ಕ್ರಿಕೆಟ್ ನಂಬಿಕೊಂಡಿರುವ 700ಕ್ಕೂ ಹೆಚ್ಚು ಕ್ರಿಕೆಟಿಗರನ್ನು ಮರೆಯುತ್ತಿದೆಯೇ ಎನ್ನುವ ಅನುಮಾನ ಮೂಡುತ್ತಿದೆ.
ಸಾಂಕ್ರಾಮಿಕ ಕೊರೊನಾದಿಂದ ಈಗಾಗಲೇ 2020ರ ಆವೃತ್ತಿಯ ರಣಜಿ ಟೂರ್ನಿ ರದ್ಧಾಗಿದೆ. ಇದೀಗ 2021ರಲ್ಲಿ ಎರಡನೇ ಅಲೆಯ ಕೋವಿಡ್ನಿಂದ ಈ ವರ್ಷವೂ ರಣಜಿ ಆಯೋಜನೆ ಅನುಮಾನವಾಗಿದೆ. ಇದರಿಂದ ಸುಮಾರು 700 ಕ್ಕೂ ಹೆಚ್ಚು ರಣಜಿ ಕ್ರಿಕೆಟಿಗರ ಪರಿಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಕಳೆದ ವರ್ಷ ಬಿಸಿಸಿಐ ರಣಜಿ ರದ್ದು ಮಾಡಿದ್ದಕ್ಕಾಗಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಇದರಿಂದ ಕೆಲವು ಸರ್ಕಾರಿ ಕೆಲಸವಿಲ್ಲದ ಪ್ರಥಮ ದರ್ಜೆ ಕ್ರಿಕೆಟಿಗರು ಶನಿವಾರ ನಡೆದ ಬಿಸಿಸಿಐ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಬಿಸಿಸಿಐ ಐಪಿಎಲ್ ಮತ್ತು ಟಿ-20 ವಿಶ್ವಕಪ್ ಬಗ್ಗೆ ಮಾತ್ರ ಚರ್ಚಿಸಿ ಪ್ರಥಮ ದರ್ಜೆ ಕ್ರಿಕೆಟಿಗರ ಪರಿಹಾರದ ಬಗ್ಗೆ ಯಾವುದೇ ಚರ್ಚೆ ನಡೆಯದಿರುವುದು ಆಶ್ಚರ್ಯ ತಂದಿದೆ. ಬಿಸಿಸಿಐ ನಡೆ ನಿಜಕ್ಕೂ ರಣಜಿ ಕ್ರಿಕೆಟ್ ಅನ್ನು ಜೀವಾನಾಧಾರವಾಗಿರಿಸಿಕೊಂಡಿರುವ ಕೆಲವು ಪ್ರಥಮ ದರ್ಜೆ ಕ್ರಿಕೆಟಿಗರಿಗೆ ನುಂಗಲಾರದ ತುತ್ತಾಗಿದೆ.