ಮೆಲ್ಬೋರ್ನ್: ಬಿಗ್ ಬ್ಯಾಷ್ ಲೀಗ್ (BBL)ನಲ್ಲಿ ಕೋವಿಡ್ ಅಬ್ಬರ ಮುಂದುವರೆದಿದೆ. ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್‌ವೆಲ್ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಮ್ಯಾಕ್ಸ್‌ವೆಲ್ ಬುಧವಾರ ರ‍್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಬಂದಿದೆ. ಅಲ್ಲದೆ ಅವರು, RT-PCR ಪರೀಕ್ಷೆಗೂ ಒಳಪಟ್ಟಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧದ ಪಂದ್ಯದ ಬಳಿಕ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಮ್ಯಾಕ್ಸ್ವೆಲ್ಗೆ ಕೋವಿಡ್ ತಗುಲಿದೆ. ನಂತರ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದು, ಸದ್ಯ ತಂಡದಿಂದ ಪ್ರತ್ಯೇಕವಾಗಿದ್ದಾರೆ ಎಂದು ಬಿಬಿಎಲ್ ಅಧಿಕೃತ ಪ್ರಕಟಣೆ ತಿಳಿಸಿದೆ.
ಮಾಕ್ಸ್ವೆಲ್ ಕೋವಿಡ್ಗೆ ಗುರಿಯಾದ ಮೆಲ್ಬೋರ್ನ್ ಸ್ಟಾರ್ಸ್ ತಂಡದ 13ನೇ ಆಟಗಾರನಾಗಿದ್ದಾರೆ. ಹೀಗಾಗಿ ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಪ್ರಮುಖ ಆಟಗಾರರಿಲ್ಲದ ತಂಡವನ್ನು ಅವರು ಮುನ್ನಡೆಸಿದ್ದರು.
ಆ್ಯಂಟಿಜನ್ ಪರೀಕ್ಷೆಯಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಹಲವು ಆಟಗಾರರು ಕೋವಿಡ್ ತಗುಲಿರುವುದು ವರದಿಯಾಗಿದೆ. ಹೀಗಾಗಿ ಅಂತಿಮ ಸಮಯದಲ್ಲಿ ಬಿಬಿಎಲ್ನ ಮೂರು ಪಂದ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ.
ನಿನ್ನೆ ಬ್ರಿಸ್ಬೇನ್ ಹೀಟ್ ತಂಡವು ಗೋಲ್ಡ್ ಕೋಸ್ಟ್‌ನಲ್ಲಿ ಸಿಡ್ನಿ ಸಿಕ್ಸರ್ಸ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿತ್ತು. ಸ್ಕಾರ್ಚರ್ಸ್ ಮತ್ತು ಸಿಡ್ನಿ ಥಂಡರ್ ತಂಡದ ಆಟಗಾರರು ಕೂಡ ವೈರಸ್‌ಗೆ ತುತ್ತಾಗಿದ್ದಾರೆ. ಅಲ್ಲದೆ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವೇಳಾಪಟ್ಟಿಯಲ್ಲಿ ಬದಲಾವಣೆಯೊಂದಿಗೆ ಎಲ್ಲ 8 ತಂಡಗಳನ್ನು ವಿಕ್ಟೋರಿಯಾಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ:ತವರಿನಲ್ಲೇ ನ್ಯೂಜಿಲ್ಯಾಂಡ್ಗೆ ಮರ್ಮಾಘಾತ: ಕಿವೀಸ್ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಗೆದ್ದ ಬಾಂಗ್ಲಾದೇಶ!