ಮೆಲ್ಬೋರ್ನ್ :ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಬಿಗ್ಬ್ಯಾಶ್ ಲೀಗ್ನ ತಮ್ಮ 100ನೇ ಪಂದ್ಯದಲ್ಲಿ 150 ರನ್ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಬಿಬಿಎಲ್ನಲ್ಲಿ ವೈಯಕ್ತಿಕ ಗರಿಷ್ಠ ರನ್ ದಾಖಲಿಸಿದ ಬ್ಯಾಟರ್ ಎಂಬ ಶ್ರೇಯಕ್ಕೆ ದಾಖಲಾದರು.
ಮೆಲ್ಬೋರ್ನ್ ಸ್ಟಾರ್ಸ್ ತಂಡ ಈಗಾಗಲೇ ನಿರಾಶದಾಯಕ ಪ್ರದರ್ಶನ ತೋರಿ ಟೂರ್ನಿಯಿಂದ ಹೊರ ಬಿದ್ದಿದೆ. ಆದರೆ, ಕೊನೆಯ ಪಂದ್ಯವನ್ನು ಗೆದ್ದ ಖುಷಿಯಲ್ಲಿ ಟೂರ್ನಿಯಲ್ಲಿ ಅಭಿಯಾನ ಮುಗಿಸುವ ಆಲೋಚನೆಯಲ್ಲಿ ಬ್ಯಾಟಿಂಗ್ ಇಳಿದು 20 ಓವರ್ಗಳಲ್ಲಿ ಬರೋಬ್ಬರಿ 2 ವಿಕೆಟ್ ಕಳೆದುಕೊಂಡು 273 ರನ್ಗಳಿಸಿತು.
ಆರಂಭಿಕನಾಗಿ ಕಣಕ್ಕಿಳಿದಿದ್ದ ಮ್ಯಾಕ್ಸ್ವೆಲ್ 41 ಎಸೆತಗಳಲ್ಲಿ ತಮ್ಮ 2ನೇ ಬಿಬಿಎಲ್ ಮತ್ತು ಲೀಗ್ ಇತಿಹಾಸದ 2ನೇ ವೇಗದ ಶತಕ ದಾಖಲಿಸಿದರು. ತಮ್ಮ 100ನೇ ಬಿಬಿಎಲ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಅವರು ಒಟ್ಟಾರೆ 64 ಎಸೆತಗಳಲ್ಲಿ 22 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 154 ರನ್ ಚಚ್ಚಿದರು. ಇವರಿಗೆ ಸಾಥ್ ನೀಡಿದ ಮಾರ್ಕಸ್ ಸ್ಟೋಯ್ನಿಸ್ 31 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್ಗಳ ಸಹಿತ ಅಜೇಯ 75 ರನ್ ಚಚ್ಚಿದರು.
ವೈಯಕ್ತಿಕ ಗರಿಷ್ಠ ರನ್ ದಾಖಲೆ :154 ರನ್ ದಾಖಲಿಸುವ ಮೂಲಕ ಮ್ಯಾಕ್ಸ್ವೆಲ್ ಬಿಗ್ಬ್ಯಾಶ್ ಇತಿಹಾಸದಲ್ಲೇ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು. ಈ ಹಿಂದೆ ಇವರ ಜೊತೆಗಾರ ಸ್ಟೋಯ್ನಿಸ್ ಸಿಡ್ನಿ ಸಿಕ್ಸರ್ ವಿರುದ್ಧ 2020ರಲ್ಲಿ 79 ಎಸೆತಗಳಲ್ಲಿ 147 ರನ್ ಸಿಡಿಸಿದ್ದು ಬಿಬಿಎಲ್ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.
ಬಿಬಿಎಲ್ನಲ್ಲಿ ಗರಿಷ್ಠ ಮೊತ್ತ ದಾಖಲು :ಮ್ಯಾಕ್ಸ್ವೆಲ್(154) ಮತ್ತು ಸ್ಟೋಯ್ನಿಸ್(75) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಮೆಲ್ಬೋರ್ನ್ ಸ್ಟಾರ್ಸ್ 273 ರನ್ ಸೂರೆಗೈದಿತು. ಇದು ಬಿಬಿಎಲ್ ಇತಿಹಾಸದಲ್ಲೇ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವಾಯಿತು. ಈ ಹಿಂದೆ 2021ರ ಜನವರಿ 22ರಂದು ಸಿಡ್ನಿ ಥಂಡರ್ 232/5 ರನ್ಗಳಿಸಿದ್ದ ಗರಿಷ್ಠ ಮೊತ್ತವಾಗಿತ್ತು.
ಬೌಂಡರಿಗಳ ಮೂಲಕವೇ ಶತಕ :64 ಎಸೆತಗಳಲ್ಲಿ 154 ರನ್ ಸಿಡಿಸಿದ ಮ್ಯಾಕ್ಸ್ವೆಲ್ 112 ರನ್ಗಳನ್ನು ಬೌಂಡರಿ ಸಿಕ್ಸರ್ಗಳ ಮೂಲಕವೇ ಸಿಡಿಸಿದರು. ಅವರು 22 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ್ದರು. ಈ ಹಿಂದೆ ಸ್ಟೋಯ್ನಿಸ್ 13 ಬೌಂಡರಿ ಮತ್ತು 8 ಸಿಕ್ಸರ್ಗಳ ಸಹಿತ 100 ರನ್ ಬಾರಿಸಿದ್ದದ್ದು ಬಿಬಿಎಲ್ನಲ್ಲಿನ ದಾಖಲೆಯಾಗಿತ್ತು.
ಇದನ್ನೂ ಓದಿ:ಸೆಹ್ವಾಗ್, ಕೀರ್ಮಾನಿ ಜತೆಗೆ ವಿಶೇಷ ದಾಖಲೆಗೆ ಪಾತ್ರರಾದ ಕನ್ನಡಿಗ ಕೆಎಲ್ ರಾಹುಲ್