ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ):ಜೂನ್ 9ರಿಂದ ಟೀಂ ಇಂಡಿಯಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಸರಣಿಗೋಸ್ಕರ ಕ್ರಿಕೆಟ್ ಆಫ್ರಿಕಾ ತಂಡ ಪ್ರಕಟಿಸಿದೆ. ನಾಯಕತ್ವದ ಜವಾಬ್ದಾರಿ ಟೆಂಬ ಬವುಮಾ ವಹಿಸಿಕೊಂಡಿದ್ದು, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್ಗೆ ಮಣೆ ಹಾಕಲಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ 21 ವರ್ಷದ ಟ್ರಿಸ್ಟನ್ ಸ್ಟಬ್ಸ್ಗೆ ಅವಕಾಶ ನೀಡಲಾಗಿದ್ದು, ಚೊಚ್ಚಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲಿದ್ದಾರೆ.
ತಮ್ಮ ಪವರ್ ಹಿಟ್ಟಿಂಗ್ ಕೌಶಲ್ಯದಿಂದ ಹೆಚ್ಚು ಖ್ಯಾತಿ ಗಳಿಸಿರುವ ಸ್ಟಬ್ಸ್ ಕಳೆದ ವರ್ಷ ಕ್ರಿಕೆಟ್ ಸೌತ್ ಆಫ್ರಿಕಾ ಆಯೋಜನೆ ಮಾಡಿದ್ದ ಟಿ-20 ಚಾಲೆಂಜ್ನಲ್ಲಿ Gbets ವಾರಿಯರ್ಸ್ ಪರ ಆಡುತ್ತಿದ್ದಾಗ 7 ಇನ್ನಿಂಗ್ಸ್ಗಳಿಂದ 183ರ ಸ್ಟ್ರೈಕ್ ರೇಟ್ನಲ್ಲಿ 23 ಸಿಕ್ಸರ್ ಸೇರಿದಂತೆ 293 ರನ್ ಗಳಿಕೆ ಮಾಡಿದ್ದರು. ಉಳಿದಂತೆ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಅರ್ನಿಚ್ ನೋರ್ಡ್ಜೆ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದು, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್ ಹಾಗೂ ವೇಯ್ನ್ ಪಾರ್ನೆಲ್ ತಂಡದಲ್ಲಿ ಚಾನ್ಸ್ ಪಡೆದು ಕೊಂಡಿದ್ದಾರೆ.
ಒಟ್ಟು 17 ಸದಸ್ಯರ ತಂಡ ಪ್ರಕಟಿಸಲಾಗಿದ್ದು,ಅನುಭವಿಗಳಾಗಿರುವ ಕ್ವಿಂಟನ್ ಡಿಕಾಕ್, ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಕಗಿಸೋ ರಬಾಡ್ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.