ಬೆಂಗಳೂರು: ಆರಂಭಿಕ ಆಟಗಾರ ಎಲ್.ಆರ್. ಚೇತನ್ (105*) ಅವರ ಆಕರ್ಷಕ ಶತಕ ಮತ್ತು ಟಿ. ಪ್ರದೀಪ್ ಅವರ ಮಾರಕ ಬೌಲಿಂಗ್ (28ಕ್ಕೆ 4) ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 25 ರನ್ ಜಯಗಳಿಸಿದೆ.
192 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶಿವಮೊಗ್ಗ ಸ್ಟ್ರೈಕರ್ಸ್ ತಂಡ ಬೆಂಗಳೂರಿನ ಬೌಲಿಂಗ್ ದಾಳಿಗೆ ಬಹು ಬೇಗನೆ ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಸೋಲು ಕಂಡಿತು. ರೋಹನ್ ಕದಮ್ (67) ಮತ್ತು ಕೆ. ಸಿದ್ಧಾರ್ಥ್ (25) ಹೊರತುಪಡಿಸಿದರೆ ಶಿವಮೊಗ್ಗದ ಇತರ ಆಟಗಾರರು ರನ್ ಗಳಿಸುವಲ್ಲಿ ವಿಫಲರಾದರು. ಈ ಸೋಲಿನೊಂದಿಗೆ ಶಿವಮೊಗ್ಗ ಸ್ಟ್ರೈಕರ್ಸ್ ಕೊನೆಯ ಸ್ಥಾನದಲ್ಲೇ ಉಳಿಯುವಂತಾಗಿದೆ.
ಚೇತನ್ ಆಕರ್ಷಕ ಶತಕ: ಆರಂಭಿಕ ಆಟಗಾರ ಎಲ್.ಆರ್. ಚೇತನ್ ಸಿಡಿಸಿದ ಅಜೇಯ ಶತಕ (105*) ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ. ಇದು ಮಹಾರಾಜ ಟ್ರೋಫಿಯಲ್ಲಿ ದಾಖಲಾದ ಮೂರನೇ ಶತಕವಾಗಿದೆ. ಗುಲ್ಬರ್ಗ ಮೈಸ್ಟಿಕ್ಸ್ನ ರೋಹನ್ ಪಾಟೀಲ್ ಹಾಗೂ ಬೆಂಗಳೂರು ಬ್ಲಾಸ್ಟರ್ಸ್ನ ನಾಯಕ ಮಯಾಂಕ್ ಅಗರ್ವಾಲ್ ಈ ಹಿಂದೆ ಶತಕ ಸಿಡಿಸಿದ್ದರು.
ಶಿವಮೊಗ್ಗ ಸ್ಟ್ರೈಕರ್ಸ್ ನಾಯಕ ಕೆ. ಗೌತಮ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡು, ಆರಂಭಿಕ ಯಶಸ್ಸನ್ನೂ ಕಂಡರು. ಬೆಂಗಳೂರು ಬ್ಲಾಸ್ಟರ್ಸ್ನ ನಾಯಕ ಮಯಾಂಕ್ ಅಗರ್ವಾಲ್ ಕೇವಲ 1 ರನ್ ಗಳಿಸಿ ಪೆವಿಲಿಯನ್ ಸೇರಿದಾಗ ಶಿವಮೊಗ್ಗ ಎದುರಾಳಿಯನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುತ್ತದೆ ಎಂಬ ನಿರೀಕ್ಷೆ ಇದ್ದಿತ್ತು.