ಢಾಕಾ: ಡಾಕಾ ಪ್ರೀಮಿಯರ್ ಲೀಗ್ ವೇಳೆ ಅಂಪೈರ್ ವಿರುದ್ಧ ಅಸಮಾಧಾನಗೊಂಡ ಬಾಂಗ್ಲಾದೇಶ ತಂಡದ ಆಲ್ರೌಂಡರ್ ಹಾಗೂ ಮೊಹಮದನ್ ಸ್ಫೋರ್ಟಿಂಗ್ ಕ್ಲಬ್ ತಂಡ ನಾಯಕ ಶಕಿಬ್ ಅಲ್ ಹಸನ್ ಸ್ಟಂಪ್ಗಳಿಗೆ ಒದ್ದು ಆಕ್ರೋಶ ಹೊರ ಹಾಕಿದ್ದರು. ಆದರೆ, ಅವರ ಈ ವರ್ತನೆಗೆ ವಿಶ್ವಾದ್ಯಂತ ಟೀಕೆಗಳ ಸುರಿಮಳೆ ಕೇಳಿ ಬಂದ ಹಿನ್ನೆಲೆ ತಾವೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿದ್ದು ಈ ರೀತಿ ವರ್ತಿಸಬಾರದಾಗಿತ್ತೆಂದು ಕ್ಷಮೆ ಕೋರಿದ್ದಾರೆ.
ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಮುಶ್ಫೀಕರ್ ರಹೀಮ್ ವಿರುದ್ಧ ಎಲ್ಬಿಡಬ್ಲ್ಯೂಗೆ ಶಕಿಬ್ ಮನವಿ ಮಾಡಿದ್ದರು. ಇದನ್ನು ಅಂಪೈರ್ ತಿರಸ್ಕಸಿದ್ದರಿಂದ ಕುಪಿತಗೊಂಡು ಸ್ಟಂಪ್ಗಳನ್ನು ಒದ್ದರು. ಈ ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಮತ್ತೊಮ್ಮೆ ಅಂಪೈರ್ಗಳ ಜೊತೆ ವಾಗ್ವಾದ ನಡೆಸಿದರು. ಆ ಸಂದರ್ಭದಲ್ಲಿ ಅಬಹಾನಿ ಲಿಮಿಟೆಡ್ ತಂಡ 21ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ರಹೀಮ್ 11 ರನ್ಗಳಿಸಿದ್ದರು.
ಮೈದಾನದಲ್ಲಿ ಈ ರೀತಿ ವರ್ತನೆಯನ್ನು ಕ್ರಿಕೆಟ್ ಅಭಿಮಾನಿಗಳು ಟೀಕಿಸಿದ ಬೆನ್ನಲ್ಲೇ ಶಕಿಬ್ ಕ್ಷಮೆಯಾಚಿಸಿದ್ದಾರೆ.