ಢಾಕಾ (ಬಾಂಗ್ಲಾದೇಶ): ಏಷ್ಯಾ ಕಪ್ 2023ರ ಆರಂಭಕ್ಕೂ ಮುನ್ನ ಬಾಂಗ್ಲಾದೇಶಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಲಿಟ್ಟನ್ ದಾಸ್ ಏಷ್ಯಾಕಪ್ನ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ. ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ನಾಳೆ ಶ್ರೀಲಂಕಾದ ವಿರುದ್ಧ ಆಡಲಿದೆ. ಜ್ವರದಿಂದ ಬಳಲುತ್ತಿರುವ ಲಿಟ್ಟನ್ ದಾಸ್ ಚೇತರಿಸಿಕೊಳ್ಳದ ಕಾರಣ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಲಿಟ್ಟನ್ ದಾಸ್ ಬದಲಿಗೆ ಅನಾಮುಲ್ ಹಕ್ ಬಿಜೋಯ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಪ್ರಕಟಿಸಿದೆ. ಅನಾಮುಲ್ ಹಕ್ ಬಿಜೋಯ್ ಅಂತಾರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವವನ್ನು ಹೊಂದಿದ್ದಾರೆ. ಅನಾಮುಲ್ ಹಕ್ 44 ಏಕದಿನ ಪಂದ್ಯಗಳನ್ನು ಆಡಿದ್ದು, ಮೂರು ಶತಕಗಳನ್ನು ಒಳಗೊಂಡಂತೆ 1254 ರನ್ ಗಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ವಿರುದ್ಧ ಬಾಂಗ್ಲಾದೇಶ ಪರ ಕೊನೆಯ ಬಾರಿಗೆ ಏಕದಿನ ಪಂದ್ಯ ಆಡಿದ್ದರು. ಅವರು ಇಂದು (ಬುಧವಾರ) ಬಾಂಗ್ಲಾದೇಶ ತಂಡವನ್ನು ಸೇರಲು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಮಿನ್ಹಾಜುಲ್ ಅಬೆದಿನ್, ಅನಾಮುಲ್ ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳಲ್ಲಿದ್ದಾರೆ. ನಾವು ಅವರನ್ನು ಬಾಂಗ್ಲಾದೇಶ ತಂಡದ ಮುಂದಿನ ಪಂದ್ಯಗಳಿಗೆ ಆಯ್ಕೆ ಮಾಡಿಕೊಂಡಿದ್ದೇವೆ. ಲಿಟ್ಟನ್ ಅವರ ಅಲಭ್ಯತೆಯಿಂದಾಗಿ, ನಮಗೆ ವಿಕೆಟ್ ಕೀಪಿಂಗ್ ಮಾಡುವ ಅಗ್ರ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ ಮತ್ತು ಅನಾಮುಲ್ ಆ ಸ್ಥಾನದಲ್ಲಿ ಆಡಲಿದ್ದಾರೆ" ಎಂದು ತಿಳಿಸಿದ್ದಾರೆ.