ಚಿತ್ತಗಾಂಗ್:ಭಾರತದ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಬಾಂಗ್ಲಾದೇಶ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಈ ಪಂದ್ಯವನ್ನೂ ವಶಪಡಿಸಿಕೊಂಡು ಸರಣಿ ಕ್ಲೀನ್ಸ್ವೀಪ್ ಮಾಡಲು ಬಾಂಗ್ಲಾ ತಂತ್ರ ಹೆಣೆದಿದ್ದರೆ, ಅಂತಿಮ ಪಂದ್ಯ ಗೆದ್ದು ಮಾನ ಉಳಿಸಿಕೊಳ್ಳಲು ಭಾರತ ಹೋರಾಡಲಿದೆ.
ಚಿತ್ತಗಾಂಗ್‌ನ ಮೈದಾನದಲ್ಲಿ ನಡೆಯಲಿರುವ ಪಂದ್ಯ ಬಾಂಗ್ಲಾಗೆ ಔಪಚಾರಿಕವಾಗಿದೆ. ಸರಣಿ ಸೋಲು ಅನುಭವಿಸಿರುವ ಭಾರತದ ಆಟಗಾರರು ಕೊನೆಯ ಪಂದ್ಯದಲ್ಲಾದರೂ ಸಿಡಿದು ಸಾಮರ್ಥ್ಯ ಸಾಬೀತು ಮಾಡಿಕೊಳ್ಳಬೇಕಿದೆ.
ಕೆಎಲ್ ರಾಹುಲ್ಗೆ ನಾಯಕತ್ವ:ಎರಡನೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿರುವ ರೋಹಿತ್ ಶರ್ಮಾ ಬದಲಾಗಿ ಕೆಎಲ್ ರಾಹುಲ್ಗೆ ನಾಯಕತ್ವ ಹೊಣೆ ನೀಡಲಾಗಿದೆ. ಬ್ಯಾಟಿಂಗ್ನಲ್ಲಿ ಸುಧಾರಣೆ ಮಾಡಿಕೊಳ್ಳಬೇಕಾದ ಒತ್ತಡದಲ್ಲಿರುವ ರಾಹುಲ್ ನಾಯಕತ್ವದ ಜವಾಬ್ದಾರಿಯೂ ನಿಭಾಯಿಸಬೇಕಾಗಿದೆ.
ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಉತ್ತಮ ಲಯದಲ್ಲಿರುವ ಆಟಗಾರರ ಅನುಪಸ್ಥಿತಿಯಿಂದಾಗಿ ತಂಡ ಖದರ್ ಕಳೆದುಕೊಂಡಿದೆ. ಹಿರಿಯ ಆಟಗಾರರಾದ ಶಿಖರ್ ಧವನ್, ವಿರಾಟ್ ಕೊಹ್ಲಿ, ರಾಹುಲ್, ರೋಹಿತ್ ಬ್ಯಾಟಿಂಗ್ನಲ್ಲಿ ಮಿಂಚುತ್ತಿಲ್ಲ. ಅದರಲ್ಲೂ ವಿರಾಟ್ ಕೊಹ್ಲಿ 2 ಪಂದ್ಯಗಳಿಂದ 18 ರನ್ ಮಾತ್ರ ಮಾಡಿದ್ದಾರೆ. ಬ್ಯಾಟಿಂಗ್ ವೈಫಲ್ಯದ ಜೊತೆಗೆ ಬೌಲಿಂಗ್ ಮತ್ತು ಫೀಲ್ಡಿಂಗ್ ಕಳೆಗುಂದಿದ್ದು ಚಿಂತೆಗೀಡು ಮಾಡಿದೆ.
ತಂಡದಲ್ಲಿ ಬದಲಾವಣೆ:ಗಾಯಕ್ಕೀಡಾದ ರೋಹಿತ್, ದೀಪಕ್ ಚಹರ್ ಬದಲಾಗಿ ಇಶಾನ್ ಕಿಶನ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.