ಚಿತ್ತಗಾಂಗ್ (ಬಾಂಗ್ಲಾದೇಶ): ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಭಾರತ ಬೃಹತ್ ಮೊತ್ತದ ಟಾರ್ಗೆಟ್ ನೀಡಿದೆ. ಇಶಾನ್ ಕಿಶನ್ ವೇಗದ ದ್ವಿಶತಕ ಮತ್ತು ವಿರಾಟ್ ಕೊಹ್ಲಿ ದಾಖಲೆಯ ಶತಕದಾಟದಿಂದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 409 ರನ್ಗಳನ್ನು ಪೇರಿಸಿದೆ.
ಚಿತ್ತಗಾಂಗ್ನ ಜಹುರ್ ಅಹ್ಮದ್ ಚೌಧರಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಟೀಂ ಇಂಡಿಯಾ ಆರಂಭಿಕ ಆಘಾತವನ್ನು ಅನುಭವಿಸಿತ್ತು. ತಂಡದ 15 ರನ್ ಆಗುಷ್ಟರಲ್ಲಿ ಶಿಖರ್ ಧವನ್ (3) ಮೆಹಿದಿ ಹಸನ್ ಮಿರಾಜ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಇದನ್ನೂ ಓದಿ:ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ವಿಶ್ವದಾಖಲೆಯ ದ್ವಿಶತಕ!
190 ಎಸೆತಗಳಲ್ಲಿ 290 ರನ್ಗಳ ಜೊತೆಯಾಟ: ಮತ್ತೊಬ್ಬ ಆರಂಭಿಕ ಇಶಾನ್ ಕಿಶನ್ ಜೊತೆಗೂಡಿದ ವಿರಾಟ್ ಕೊಹ್ಲಿ ಭರ್ಜರಿ ಆಟ ಪ್ರದರ್ಶಿಸಿದರು. ಇಬ್ಬರೂ ಕೂಡ ಅದ್ಭುತ ಹಾಗೂ ಆಕರ್ಷಕ ಆಟವಾಡಿ ಕೇವಲ 190 ಎಸೆತಗಳಲ್ಲಿ ಬೃಹತ್ 290 ರನ್ಗಳ ಜೊತೆಯಾಟ ನೀಡಿದರು.
ಅದರಲ್ಲೂ, ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮಾಡಿ, 85 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ನಂತರ ಮತ್ತಷ್ಟು ಬಿರುಸಿನ ಆಟವಾಡಿದ ಅವರು ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ಕೇವಲ 126 ಎಸೆತಗಳಲ್ಲಿ ವೇಗದ ದ್ವಿಶತಕ ದಾಖಲಿಸಿದರು. ಈ ಮೂಲಕ ದ್ವಿಶತಕ ದಾಖಲಿಸಿದ ಭಾರತದ ನಾಲ್ಕನೇ ಆಟಗಾರರ ಎಂಬ ಕೀರ್ತಿಗೆ ಇಶಾನ್ ಕಿಶನ್ ಪಾತ್ರರಾದರು.
ಸಿಕ್ಸರ್ ಮತ್ತು ಬೌಂಡರಿಗಳಿಂದ ಬಂದ 156 ರನ್: ದ್ವಿಶಕತದ ನಂತರ ಒಂದು ಬೌಂಡರಿ ಮತ್ತು ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್ ತಸ್ಕಿನ್ ಅಹ್ಮದ್ ಬೌಲಿಂಗ್ನಲ್ಲಿ ಓಟಾದರು. ಆದರೆ, ಒಟ್ಟಾರೆ 131 ಎಸೆತಗಳಲ್ಲಿ 10 ಸಿಕ್ಸರ್ಗಳು ಮತ್ತು 24 ಬೌಂಡರಿಗಳ ಸಮೇತ 210 ರನ್ಗಳನ್ನು ಇಶಾನ್ ಬಾರಿಸಿದರು. ಇದರಲ್ಲಿ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 156 ರನ್ಗಳು ಬಂದಿವೆ. ಇಶಾನ್ 160 ರನ್ ರೇಟ್ನಲ್ಲಿ ಡಬಲ್ ಸೆಂಚುರಿ ದಾಖಲಿಸಿದ್ದು, ಏಕದಿನ ಕ್ರಿಕೆಟ್ ದಾಖಲಾದ ವೇಗದ ದ್ವಿಶತಕ ಇದಾಗಿದೆ.
ಕಿಂಗ್ ಕೊಹ್ಲಿ ವಿರಾಟ ರೂಪ:ಮತ್ತೊಂದೆಡೆ ವಿರಾಟ್ ಕೊಹ್ಲಿ ಕೂಡ ಆಕರ್ಷಕ ಬ್ಯಾಟಿಂಗ್ ಮಾಡಿದರು. 86 ಎಸೆತಗಳಲ್ಲಿ ಶತಕ ಸಿಡಿಸಿ ವಿರಾಟ್ ಮಿಂಚಿದರು. ಇದು ಏಕದಿನದಲ್ಲಿ ಕೊಹ್ಲಿ ಬಾರಿಸಿದ 44ನೇ ಶತಕವಾಗಿದ್ದು, ಒಟ್ಟಾರೆ 72ನೇ ಶತಕವನ್ನು ರನ್ ಮಿಷನ್ ದಾಖಲಿಸಿದರು. ಆದರೆ, ಶತಕದ ನಂತರ ಬೇಗ ಔಟಾದ ವಿರಾಟ್ 91 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 11 ಬೌಂಡರಿಗಳೊಂದಿಗೆ 113 ರನ್ ಕಲೆ ಹಾಕಿದರು.
ವಿಕೆಟ್ಗಳ ಪತನ: ಇಶಾನ್ ಮತ್ತು ಕೊಹ್ಲಿ ಔಟಾದ ಬಳಿಕ ಟೀಂ ಇಂಡಿಯಾದ ಆಟಗಾರರು ಅಷ್ಟೊಂದು ಬ್ಯಾಟ್ ಬೀಸಲಿಲ್ಲ. ಶ್ರೇಯಸ್ ಅಯ್ಯರ್ (3), ನಾಯಕ ಕೆಎಲ್ ರಾಹುಲ್ (8) ಬೇಗ ಪೆವಿಲಿಯನ್ ಸೇರಿದರು. ನಂತರದಲ್ಲಿ ವಾಷಿಂಗ್ಟನ್ ಸುಂದರ್ (37) ಮತ್ತು ಅಕ್ಷರ್ ಪಟೇಲ್ (20) ಕೊಂಚ ಉತ್ತಮವಾಗಿ ಆಟವಾಡಿದರು. ಶಾರ್ದೂಲ್ ಠಾಕೂರ್ ಕೇವಲ 3 ರನ್ಗೆ ವಿಕೆಟ್ ಒಪ್ಪಿಸಿದರು.
ಹೀಗಾಗಿ 40 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದ್ದ ಭಾರತ ತಂಡ ನಂತರದ 10 ಓವರ್ಗಳಲ್ಲಿ ಕೇವಲ 70 ರನ್ಗಳ ಮಾತ್ರ ಗಳಿಸಲು ಸಾಧ್ಯವಾಯಿತು. ಜೊತೆಗೆ ಕೊನೆಯ 10 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಅಂತಿಮವಾಗಿ 409 ರನ್ಗಳನ್ನು ಟೀಂ ಇಂಡಿಯಾ ಪೇರಿಸಿತು. ಬಾಂಗ್ಲಾ ಪರವಾಗಿ ತಸ್ಕಿನ್ ಅಹ್ಮದ್, ಎಬಾಡೋಟ್ ಹೊಸೈನ್ ಮತ್ತು ಶಕೀಬ್ ಅಲ್ ಹಸನ್ ತಲಾ ವಿಕೆಟ್ ಪಡೆದರೆ, ಮುಸ್ತಫಿಜುರ್ ಹಾಗೂ ಮೆಹಿದಿ ಹಸನ್ ಮಿರಾಜ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ:ಬಾಂಗ್ಲಾ ವಿರುದ್ಧ ವಿರಾಟ್ ಭರ್ಜರಿ ಸೆಂಚುರಿ: ವಿಶ್ವ ಕ್ರಿಕೆಟ್ನಲ್ಲಿ ಪಾಂಟಿಂಗ್ ದಾಖಲೆ ಮುರಿದ ಕಿಂಗ್ ಕೊಹ್ಲಿ