ಕರ್ನಾಟಕ

karnataka

ETV Bharat / sports

128 ರನ್​ಗಳಿಸಲೂ ಕಾಂಗರೂ ಪಡೆ ವಿಫಲ.. T20ಯಲ್ಲಿ ಬಾಂಗ್ಲಾಗೆ ಸತತ ಮೂರನೇ ಜಯ!

ಸತತ ಮೂರು ಟಿ-20 ಪಂದ್ಯಗಳನ್ನ ಸೋತು ಆಸ್ಟ್ರೇಲಿಯಾ ತೀವ್ರ ಮುಖಭಂಗಕ್ಕೊಳಗಾಗಿದೆ. ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಬಾಂಗ್ಲಾದೇಶ ಸರಣಿ ಕೈವಶ ಮಾಡಿಕೊಂಡಿದೆ.

Bangladesh vs Australia
Bangladesh vs Australia

By

Published : Aug 6, 2021, 11:02 PM IST

Updated : Aug 6, 2021, 11:42 PM IST

ಢಾಕಾ(ಬಾಂಗ್ಲಾದೇಶ):ಟಿ-20 ಕ್ರಿಕೆಟ್​ನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮೇಲೆ ಸವಾರಿ ಮಾಡುತ್ತಿರುವ ಬಾಂಗ್ಲಾದೇಶವು ಸತತ 3ನೇ ಪಂದ್ಯದಲ್ಲೂ ಗೆಲುವಿನ ನಗೆ ಬೀರಿದೆ. 128 ರನ್​ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಆಸ್ಟ್ರೇಲಿಯಾ ಇಂದಿನ ಪಂದ್ಯದಲ್ಲೂ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯರ ತಂಡ 3-0 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಸರಣಿ ಕೈವಶ ಮಾಡಿಕೊಂಡಿದೆ.

ಆಕರ್ಷಕ ಬ್ಯಾಟಿಂಗ್​ ಮಾಡಿದ ಬಾಂಗ್ಲಾ ಕ್ಯಾಪ್ಟನ್​​

ಶೇರ್​ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಬಾಂಗ್ಲಾ, ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 127 ರನ್​ ಗಳಿಸಿತು. ತಂಡದ ಪರ ನಾಯಕ​ ಮೊಹಮ್ಮದುಲ್ಲಾ 52 ರನ್​ ಬಾರಿಸಿ ಗರಿಷ್ಠ ಸ್ಕೋರರ್​ ಆಗಿ ಹೊರಹೊಮ್ಮಿದರು.

ಆಸ್ಟ್ರೇಲಿಯಾ ಪರ ಬೌಲಿಂಗ್​ನಲ್ಲಿ ಮಿಂಚಿದ ನಾಥನ್​ ಇಲ್ಸಿ 3 ವಿಕೆಟ್​, ಹ್ಯಾಜಲ್​ವುಡ್​ ಹಾಗೂ ಜಂಪಾ ತಲಾ 2 ವಿಕೆಟ್​ ಪಡೆದುಕೊಂಡರು. 128 ರನ್​ಗಳ ಗುರಿ ಬೆನ್ನತ್ತಿದ ಕಾಂಗರೂ ಪಡೆ ಆರಂಭದಲ್ಲೇ ನಾಯಕ ​ ಮ್ಯಾಥೋ ವೇಡ್​​ (1ರನ್​) ವಿಕೆಟ್ ಕಳೆದುಕೊಂಡಿತು. ಆದರೆ, ಈ ವೇಳೆ ಒಂದಾದ ಬೆನ್ ಮ್ಯಾಕ್‌ಡರ್ಮೊಟ್​(35ರನ್​) ಹಾಗೂ ಮಿಚೆಲ್​ ಮಾರ್ಷ್ ​(51​) ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು.

ಆದರೆ ಇವರ ವಿಕೆಟ್​ ಪತಗೊಳ್ಳುತ್ತಿದ್ದಂತೆ ತಂಡ ಆಘಾತಕ್ಕೊಳಗಾಯಿತು. ಆರಂಭದ 15 ಓವರ್​ಗಳಲ್ಲಿ 80 ರನ್​ ಗಳಿಕೆಗೆ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾಗೆ ಕೊನೆಯ 5 ಓವರ್​ಗಳಲ್ಲಿ 48 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಮಿಚೆಲ್​ ಮಾರ್ಷ್​ ವಿಕೆಟ್ ಕಳೆದುಕೊಂಡಿದ್ದರಿಂದ ತಂಡ ಸೋಲಿಗೊಳಗಾಯಿತು.

ವಿಕೆಟ್ ಪಡೆದಾಗ ಆಸ್ಟ್ರೇಲಿಯಾ ಸಂಭ್ರಮ

ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ಸ್ ​​(2​), ಅಲೆಕ್ಸ್​ ಕ್ಯಾರಿ (20​) ಹಾಗೂ ಕ್ರಿಸ್ಟೋನ್​(7​) ಸ್ಫೋಟಕ ಆಟ ಆಡುವಲ್ಲಿ ವಿಫಲಗೊಂಡಿದ್ದರಿಂದ ತಂಡ 10 ರನ್​ಗಳ ಸೋಲು ಅನುಭವಿಸುವಂತಾಯಿತು. ಆಸ್ಟ್ರೇಲಿಯಾ ಕೊನೆಯದಾಗಿ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 117 ರನ್​ಗಳಿಕೆ ಮಾಡಲು ಮಾತ್ರ ಶಕ್ತವಾಯಿತು.

ಏಕಾಂಗಿ ಹೋರಾಟ ನಡೆಸಿದ ಮಾರ್ಷ್​

ಬಾಂಗ್ಲಾದೇಶದ ಪರ ಬೌಲಿಂಗ್​ನಲ್ಲಿ ಮಿಂಚಿದ ಇಸ್ಲಾಂ 2 ವಿಕೆಟ್ ಪಡೆದುಕೊಂಡರೆ, ಅಹ್ಮದ್​ ಹಾಗೂ ಹಸನ್ ತಲಾ 1 ವಿಕೆಟ್ ಪಡೆದುಕೊಂಡರು. ಸೌಮ್ಯ ಸರ್ಕಾರ್​, ರಹಮಾನ್ ಹಾಗೂ ಮೆಹದಿ ಹಸನ್​ ವಿಕೆಟ್ ಪಡೆದುಕೊಳ್ಳುವಲ್ಲಿ ವಿಫಲಗೊಂಡರೂ, ಅಧಿಕ ರನ್​ ಬಿಟ್ಟು ಕೊಡಲಿಲ್ಲ. ಈಗಾಗಲೇ ಮುಕ್ತಾಯಗೊಂಡಿರುವ ಎರಡು ಟಿ-20 ಪಂದ್ಯಗಳಲ್ಲಿ ಬಾಂಗ್ಲಾದೇಶ ಜಯ ಸಾಧಿಸಿದ್ದು, ಇಂದಿನ ಪಂದ್ಯದಲ್ಲೂ ಗೆದ್ದು ಸರಣಿ ಕೈವಶ ಮಾಡಿಕೊಂಡಿದೆ.​

Last Updated : Aug 6, 2021, 11:42 PM IST

ABOUT THE AUTHOR

...view details