ಲಾಹೋರ್ (ಪಾಕಿಸ್ತಾನ): ಏಷ್ಯಾಕಪ್ನ 4ನೇ ಪಂದ್ಯದಲ್ಲಿ ಬಿ ಗುಂಪಿನ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿ ಆಗುತ್ತಿದ್ದು, ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬ್ಯಾಟಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಈ ಪಂದ್ಯ ಪಾಕ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಅಫ್ಘಾನಿಸ್ತಾನ ಮೊದಲ ಬಾರಿಗೆ ಪಾಕಿಸ್ತಾನದ ಮೈದಾನದಲ್ಲಿ ಪಂದ್ಯವಾಡುತ್ತಿದೆ.
ಸೂಪರ್ ಫೋರ್ನಲ್ಲಿ ಸ್ಥಾನ ಪಡೆಯಲು ಬಾಂಗ್ಲಾದೇಶಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯದಂತಾಗಿದೆ. ಆಗಸ್ಟ್ 31 ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾ ಪಲ್ಲೆಕೆಲೆ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 164ಕ್ಕೆ ಆಲ್ ಔಟ್ ಆಗಿತ್ತು. ಈ ಸಂಕ್ಷಿಪ್ತ ಸ್ಕೋರ್ನ್ನು ಶ್ರೀಲಂಕಾ 5 ವಿಕೆಟ್ನಿಂದ ಗೆದ್ದುಕೊಂಡಿತ್ತು. ಲಂಕಾ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಬಾಂಗ್ಲಾ ಮೂರು ಬದಲಾವಣೆಯೊಂದಿಗೆ ಇಂದು ಮೈದಾನಕ್ಕಿಳಿದಿದೆ.
ಟಾಸ್ ಗೆದ್ದ ನಂತರ ಬಾಂಗ್ಲಾದೇಶದ ನಾಯಕ ಮಾತನಾಡಿ,"ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ಉತ್ತಮ ವಿಕೆಟ್ ಮತ್ತು ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಮಾಡಲಾಗಿದೆ. ತಂಡದಲ್ಲಿ ಮೂರು ಬದಲಾವಣೆಗಳಿವೆ. ಕಳೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಕಂಡು ಬರಲಿಲ್ಲ. ಇಂದು ಹೊಸ ದಿನ ವಿಕೆಟ್ ಉತ್ತಮವಾಗಿದ್ದು, ಆಶಾದಾಯಕವಾಗಿದ್ದೇವೆ" ಎಂದಿದ್ದಾರೆ.
ಅಫ್ಘಾನಿಸ್ತಾನದ ನಾಯಕ ಹಶ್ಮತುಲ್ಲಾ ಶಾಹಿದಿ," ಟಾಸ್ ಗೆದ್ದಲ್ಲಿ ನಾವು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆವು. ತುಂಬಾ ಉತ್ಸುಕರಾಗಿದ್ದೇವೆ. ನಮಗೆ ಇಲ್ಲಿ ಸಾಕಷ್ಟು ಪ್ರೇಕ್ಷಕರ ಬೆಂಬಲ ಇದೆ. ಉತ್ತಮ ತಯಾರಿ ನಡೆಸಿಕೊಂಡಿದ್ದೇವೆ. ಪಾಕಿಸ್ತಾನದ ವಿರುದ್ಧ ಇಲ್ಲಿ ಇತ್ತೀಚೆಗೆ ಪಂದ್ಯಗಳನ್ನು ಆಡಿದ್ದೇವೆ. ಅದು ಒಳ್ಳೆಯ ಅನುಭವವನ್ನು ನೀಡಿದೆ" ಎಂದಿದ್ದಾರೆ.