ಕರ್ನಾಟಕ

karnataka

ETV Bharat / sports

ವಿಶ್ವಕಪ್​ ಬಳಿಕ ನಾಯಕತ್ವ, 2025 ರ ಬಳಿಕ ಕ್ರಿಕೆಟ್​ನಿಂದ ನಿವೃತ್ತಿ: ಬಾಂಗ್ಲಾ ಕ್ರಿಕೆಟರ್​ ಶಕೀಬ್​ ಅಲ್​​ ಹಸನ್​

ಆಲ್​ರೌಂಡರ್​ ಶಕೀಬ್ ಅಲ್ ಹಸನ್ ಭಾರತದ ಆತಿಥ್ಯದಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್​ನಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಮೊದಲ ಅಭ್ಯಾಸ ಪಂದ್ಯವನ್ನು ಸೆಪ್ಟೆಂಬರ್ 29 ರಂದು ಗುವಾಹಟಿಯಲ್ಲಿ ಆಡಲಿದೆ.

ಬಾಂಗ್ಲಾ ಕ್ರಿಕೆಟರ್​ ಶಕೀಬ್​ ಅಲ್​​ ಹಸನ್​
ಬಾಂಗ್ಲಾ ಕ್ರಿಕೆಟರ್​ ಶಕೀಬ್​ ಅಲ್​​ ಹಸನ್​

By ETV Bharat Karnataka Team

Published : Sep 28, 2023, 5:59 PM IST

ಹೈದರಾಬಾದ್:ಬಾಂಗ್ಲಾದೇಶ ಕ್ರಿಕೆಟ್​​ ತಂಡದ ತಾರಾ ಆಲ್​ರೌಂಡರ್​, ನಾಯಕ ಶಕೀಬ್​ ಅಲ್​ ಹಸನ್​ 2025 ರ ಚಾಂಪಿಯನ್ಸ್​ ಟ್ರೋಫಿ ಬಳಿಕ ಮೂರು ಮಾದರಿಯ ಕ್ರಿಕೆಟ್​​ಗೆ ವಿದಾಯ ಹೇಳುವ ಸುಳಿವು ನೀಡಿದ್ದಾರೆ. ಅಲ್ಲದೇ, ಮುಂದಿನ ತಿಂಗಳಿನಿಂದ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​-2023 ನಂತರ ತಂಡದ ನಾಯಕತ್ವ ತ್ಯಜಿಸುವುದಾಗಿ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶಕೀಬ್​, ಭವಿಷ್ಯದ ಬಗ್ಗೆ ಯಾರೂ ಊಹಿಸಲು ಸಾಧ್ಯವಿಲ್ಲ. 2025 ರಲ್ಲಿ ಏಕದಿನ ಮಾದರಿಯಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ. ಅದಾದ ಬಳಿಕ ನಾನು ಬಹುಶಃ ಕ್ರಿಕೆಟ್​ನಿಂದಲೇ ದೂರ ಉಳಿಯಬಹುದು. ಭವಿಷ್ಯದ ಬಗ್ಗೆ ಹೇಳಲು ಸಾಧ್ಯವಿಲ್ಲವಾದರೂ, ಈ ಕ್ಷಣದಲ್ಲಿ ನಾನು ಅಂಥದ್ದೊಂದು ಕಲ್ಪನೆಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.

ವಿಶ್ವಕಪ್​ ಬಳಿಕ ಕ್ಯಾಪ್ಟನ್ಸಿ ಬಿಡುವೆ:ನಾಯಕತ್ವ ವಿಚಾರವಾಗಿಯೂ ಮಾತನಾಡಿರುವ ಶಕೀಬ್​, ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ ನನಗೆ ತಂಡದ ನಾಯಕತ್ವ ವಹಿಸಿದಾಗ ತಂಡವನ್ನು ಕಟ್ಟುವ ಹೊಣೆ ನೀಡಿದರು. ಇದನ್ನು ನಿಭಾಯಿಸಿದ ತೃಪ್ತಿ ಇದೆ. ಹೀಗಾಗಿ ನಾನು ಭಾರತದಲ್ಲಿ ನಡೆಯುವ 2023 ರ ಸಾಲಿನ ಏಕದಿನ ವಿಶ್ವಕಪ್​ ಬಳಿಕ ತಂಡವನ್ನು ಮುನ್ನಡೆಸುವುದಿಲ್ಲ ಎಂದು ತಿಳಿಸಿದರು.

ನಾಯಕತ್ವದಲ್ಲಿ ಒತ್ತಡ ಸಹಜ:ತಂಡದ ಆಡಳಿತ ಮಂಡಳಿ ನಾಯಕತ್ವದ ಹೊಣೆ ನೀಡಿದಾಗ ಒಪ್ಪಿಕೊಂಡೆ. ತಂಡಕ್ಕೆ ಅಗತ್ಯವಿದ್ದಾಗ ನಾನು ಆ ಜವಾಬ್ದಾರಿ ವಹಿಸಿಕೊಂಡೆ. ಕ್ಯಾಪ್ಟನ್ಸಿ ನಿಭಾಯಿಸುವುದು ಸುಲಭವಲ್ಲ. ಒತ್ತಡ ಇದ್ದೇ ಇರುತ್ತದೆ. ನಾಯಕನಾಗಿ ಅಲ್ಲದಿದ್ದರೆ, ತುಂಬಾ ಸಲೀಸಾಗಿ ಕ್ರಿಕೆಟ್​ ಆಡಬಹುದು. 10 ಓವರ್‌ ಬೌಲ್, ನಿರಾಳವಾಗಿ ಬ್ಯಾಟಿಂಗ್ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮೀಮ್ ಇಕ್ಬಾಲ್ ಬಾಲಿಶ ವರ್ತನೆ:ವಿಶ್ವಕಪ್​ ತಂಡದಲ್ಲಿ ಸ್ಥಾನ ಸಿಗದಿರಲು ನಾನೇ ಕಾರಣ ಎಂದು ಆರೋಪ ಮಾಡಿರುವ ತಮೀಮ್​ ಇಕ್ಬಾಲ್​ ವಿರುದ್ಧ ಶಕೀಬ್​ ಅಲ್​ ಹಸನ್​ ಟೀಕಿಸಿದರು. ತಮೀಮ್​ ವರ್ತನೆ ಬಾಲಿಶವಾಗಿದೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದೆ ಗಲಾಟೆ ಮಾಡುತ್ತಿದ್ದಾರೆ. ಅವರು ಗಾಯಗೊಂಡಿದ್ದೇ ಇದಕ್ಕೆ ಕಾರಣ. ಜೊತೆಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ರಾಜಕೀಯ ಮಾಡುತ್ತಿದೆ ಎಂದೂ ದೂಷಿಸಿದ್ದಾರೆ. ವಿಶ್ವಕಪ್ ತಂಡಕ್ಕೆ ತಮೀಮ್‌ಗಿಂತ ಮಹಮ್ಮದುಲ್ಲಾ ಉತ್ತಮ ಆಯ್ಕೆಯಾಗಿತ್ತು ಎಂದಿದ್ದಾರೆ.

ಶಕೀಬ್​ ಕ್ರಿಕೆಟ್​ ಸಾಧನೆ:ಶಕೀಬ್ ಅಲ್ ಹಸನ್, ಪ್ರಸ್ತುತ ಐಸಿಸಿ ಪುರುಷರ ಏಕದಿನ ಮತ್ತು ಟಿ20 ಮಾದರಿಯ ಆಲ್​ರೌಂಡರ್ ವಿಭಾಗದಲ್ಲಿ ನಂಬರ್​ 1 ಸ್ಥಾನದಲ್ಲಿದ್ದಾರೆ. ಶಕೀಬ್ ತಮ್ಮ ವೃತ್ತಿಜೀವನದಲ್ಲಿ 240 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದು, 308 ವಿಕೆಟ್‌ಗಳೊಂದಿಗೆ 37.7 ಸರಾಸರಿಯಲ್ಲಿ 7384 ರನ್ ಗಳಿಸಿದ್ದಾರೆ. ಬಾಂಗ್ಲಾದೇಶ ಪರ ಏಕದಿನದಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ ಹೌದು. ಅಲ್ಲದೇ, ಏಕದಿನದಲ್ಲಿ ದೇಶದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

ಇದನ್ನೂ ಓದಿ:ವಿಶ್ವಕಪ್​ ಬಳಿಕ ಏಕದಿನ ಕ್ರಿಕೆಟ್​ಗೆ ವಿದಾಯ.. ವಿರಾಟ್​ ಜೊತೆ ಕಿತ್ತಾಡಿದ್ದ ಅಫ್ಘಾನ್​ ವೇಗಿ ನವೀನ್​ ಅಚ್ಚರಿಯ ನಿರ್ಧಾರ

ABOUT THE AUTHOR

...view details