ಢಾಕಾ: ಯುಎಇ ಮತ್ತು ಓಮನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಿಂದ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ಮನ್ ತಮೀಮ್ ಇಕ್ಬಾಲ್ ಹಿಂದೆ ಸರಿದಿದ್ದಾರೆ. ನನ್ನ ಗೈರಿನಲ್ಲಿ ಕಳೆದ 15ರಿಂದ 20 ಟಿ20 ಪಂದ್ಯಗಳಲ್ಲಿ ದೇಶದ ಪರ ಆಡಿ ಉತ್ತಮ ಪ್ರದರ್ಶನ ತೋರಿರುವ ಆರಂಭಿಕರ ಸ್ಥಾನವನ್ನು ನಾನು ಕಸಿಯುವುದಕ್ಕೆ ಬಯಸುವುದಿಲ್ಲ ಎಂದು ವಿಡಿಯೋ ಸಂದೇಶದ ಮೂಲಕ ಇಕ್ಬಾಲ್ ವಿಶ್ವಕಪ್ಗೆ ತಮ್ಮ ಅಲಭ್ಯತೆಯನ್ನು ತಿಳಿಸಿದ್ದಾರೆ.
ಏಪ್ರಿಲ್ನಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಎಡಗೈ ಬ್ಯಾಟ್ಸ್ಮನ್ ಮಂಡಿ ನೋವಿಗೆ ತುತ್ತಾಗಿದ್ದರು. ನಂತರ ನಡೆದ ಜಿಂಬಾಬ್ವೆ ಮತ್ತು ಆಸ್ಟ್ರೇಲಿಯಾ ಹಾಗೂ ಪ್ರಸ್ತುತ ತವರಿನಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದರು.
"ಈಗಷ್ಟೇ ನಾನು ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಮಿನ್ಹಾಜುಲ್ ಅಬೆದಿನ್ ಅವರಿಗೆ ಕರೆ ಈ ವಿಚಾರದ ಬಗ್ಗೆ ಮಾತನಾಡಿದ್ದೇನೆ. ನಾನು ವಿಶ್ವಕಪ್ ತಂಡದಲ್ಲಿ ಆಡಲು ಬಯಸುತ್ತಿಲ್ಲ ಮತ್ತು ಆಯ್ಕೆಗೆ ನಾನು ಲಭ್ಯನಾಗಿರುವುದಿಲ್ಲ ಎಂದು ಅವರಿಗೆ ಹೇಳಿದ್ದೇನೆ. ನಾನು ಟೂರ್ನಮೆಂಟ್ ಆಡದಿರಲು ಸಾಕಷ್ಟು ಕಾರಣಗಳಿವೆ. ಪ್ರಮುಖ ಕಾರಣವೆಂದರೆ ನಾನು ದೀರ್ಘ ಸಮಯದಿಂದ ಈ ಮಾದರಿಯಲ್ಲಿ ಆಡಿಲ್ಲ. ಆದರೆ ನಾನು ಮಂಡಿ ಗಾಯದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ, ವಿಶ್ವಕಪ್ವರೆಗೆ ನಾನು ಚೇತರಿಸಿಕೊಳ್ಳಬಹುದು."
"ಆದರೆ ನನ್ನ ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದರೆ, ನಾನು ಆಡದಿದ್ದ ಈ 15ರಿಂದ16 ಟಿ20 ಪಂದ್ಯಗಳಲ್ಲಿ ಆಡಿರುವ ಆಟಗಾರರನ್ನು ಕಡೆಗಣಿಸಿ ನಾನು ವಿಶ್ವಕಪ್ ಆಡುವುದು ನ್ಯಾಯೋಚಿತವಲ್ಲ. ನಾನು ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗುವುದು ಭಾಗಶಃ ಖಚಿತ. ಆದರೆ ಅದು ಸರಿಯಲ್ಲ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಸಂದೇಶವನ್ನು ಬೋರ್ಡ್ ಅಧ್ಯಕ್ಷರಿಗೆ ಮತ್ತು ಆಯ್ಕೆ ಸಮಿತಿಗೆ ಅರ್ಥ ಮಾಡಿಸಿದ್ದೇನೆ" ಎಂದು ತಮೀಮ್ ಹೇಳಿದ್ದಾರೆ.
ಇನ್ನು ಇಕ್ಬಾಲ್ ತಾವೂ ವಿಶ್ವಕಪ್ ಆಡುತ್ತಿಲ್ಲ ಅಷ್ಟೇ, ಇದನ್ನು ಟಿ20ಗೆ ನಿವೃತ್ತಿ ಎಂದು ಭಾವಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನಾನು ನಿಮಗೆ ಒಂದು ವಿಚಾರವನ್ನು ಸ್ಪಷ್ಟಪಡಿಸುತ್ತೇನೆ, ಅದೇನೆಂದರೆ ನಾನು ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿಲ್ಲ. ಆದರೆ ಈ ವಿಶ್ವಕಪ್ ಮಾತ್ರ ಆಡುವುದಿಲ್ಲ. ನನ್ನ ಪ್ರಕಾರ ಇದು ಒಳ್ಳೆಯ ನಿರ್ಧಾರ. ನನ್ನ ಗೈರಿನಲ್ಲಿ ರಾಷ್ಟ್ರೀಯ ತಂಡದ ಪರ ಆಡಿರುವ ಆ ಯುವ ಆಟಗಾರರಿಗೆ ಈ ಅವಕಾಶ ಸಿಗಬೇಕು. ಅವರ ಸಿದ್ಧತೆ ನನಗಿಂತ ಉತ್ತಮವಾಗಿದೆ. ಅವರು ನನಗಿಂತ ತಂಡಕ್ಕೆ ಉತ್ತಮವಾಗಿ ಸೇವೇ ಸಲ್ಲಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.
"ಈ ವಿಚಾರವಾಗಿ ನನ್ನ ವಾಟ್ಸಾಪ್ ಸಂದೇಶ ಅಥವಾ ಕರೆ ಮಾಡುವುದು ಬೇಡ ಎಂದು ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳುತ್ತೇನೆ. ನಾನು ಈ ನಿರ್ಧಾರವನ್ನು ಈಗಾಗಲೇ ತೆಗೆದುಕೊಂಡಿದ್ದೇನೆ ಮತ್ತು ಅದಕ್ಕೆ ಬದ್ಧನಾಗಿರುತ್ತೇನೆ. ನಾನು ಈಗಾಗಲೇ ನಿಮಗೆ ಎಲ್ಲಾ ಕಾರಣಗಳನ್ನು ನೀಡಿದ್ದೇನೆ. ನೀವು ನನ್ನ ಖಾಸಗಿತನ ಮತ್ತು ನಿರ್ಧಾರವನ್ನು ಗೌರವಿಸುವಿರಿ ಎಂದು ನಾನು ಭಾವಿಸುತ್ತೇನೆ. ಇದರಲ್ಲಿ ಯಾವುದೇ ವಿವಾದವಿಲ್ಲ" ಎಂದು ಇಕ್ಬಾಲ್ ವಿಡಿಯೋ ಕೊನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಟಿ20 ಕ್ರಿಕೆಟ್: ಬಾಂಗ್ಲಾದೇಶ ವಿರುದ್ಧ 60ಕ್ಕೇ ಆಲೌಟ್ ಆದ ನ್ಯೂಜಿಲ್ಯಾಂಡ್!