ಸೆಂಚುರಿಯನ್(ದಕ್ಷಿಣ ಆಫ್ರಿಕಾ):ಸರಣಿ ಗೆಲ್ಲಲು ಉಭಯ ತಂಡಗಳಿಗೆ ನಿರ್ಣಾಯಕವಾಗಿದ್ದ ಕೊನೆಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲುವಿನ ನಗೆ ಬೀರಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ 2-1 ಅಂತರದಿಂದ ಗೆಲುವು ದಾಖಲು ಮಾಡುವ ಮೂಲಕ ಬಾಂಗ್ಲಾದೇಶ ದಕ್ಷಿಣ ಆಫ್ರಿಕಾದಲ್ಲಿ ಇತಿಹಾಸ ರಚಿಸಿತು. ಹರಿಣಗಳ ನಾಡಲ್ಲಿ ಬಾಂಗ್ಲಾದೇಶಕ್ಕಿದು ಚೊಚ್ಚಲ ಏಕದಿನ ಸರಣಿ ಗೆಲುವು.
ಮೂರು ಏಕದಿನ ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಬಾಂಗ್ಲಾ ಗೆಲ್ಲುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿತ್ತು. ಎರಡನೇ ಪಂದ್ಯದಲ್ಲಿ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದ ಆತಿಥೇಯರು ಗೆಲುವು ಸಾಧಿಸಿದ್ದು ಸರಣಿಯನ್ನು 1-1 ಅಂತರದಲ್ಲಿ ಸಮಬಲ ಮಾಡಿಕೊಂಡಿದ್ದರು. ಹೀಗಾಗಿ, ಇಂದಿನ ಪಂದ್ಯ ಇತ್ತಂಡಗಳಿಗೂ ನಿರ್ಣಾಯಕವಾಗಿತ್ತು.
ಬಾಂಗ್ಲಾ ಅಮೋಘ ಪ್ರದರ್ಶನ:ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ದ.ಆಫ್ರಿಕಾ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಕೇವಲ 12ರನ್ಗಳಿಸಿದ್ದ ವೇಳೆ ಕ್ವಿಂಟನ್ ಡಿಕಾಕ್ ಅವರು ಮೆಹದಿ ಹಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ವೆರ್ರೆನ್ನೆ(9), ನಾಯಕ ಬವುಮಾ (2)ರನ್ಗಳಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಬಂದ ದುಸೆನ್ ಕೂಡ 4ರನ್ಗಳಿಸಿ ವಿಕೆಟ್ ಒಪ್ಪಿಸಿದರು. ತಂಡ 83ರನ್ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು.