ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಇನ್ನೇನು 10 ದಿನಗಳಲ್ಲಿ ಶುರುವಾಗಲಿದೆ. ಆಗಸ್ಟ್ 30ರಂದು ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ನೇಪಾಳ ನಡುವಿನ ಪಂದ್ಯದೊಂದಿಗೆ ಪ್ರತಿಷ್ಠಿತ ಪಂದ್ಯಾವಳಿಗೆ ಚಾಲನೆ ಸಿಗಲಿದೆ. ಮಹತ್ವದ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ ಎಲ್ಲಾ ತಂಡಗಳು ಈಗಾಗಲೇ ತರಬೇತಿ ಶಿಬಿರಗಳಲ್ಲಿ ಬ್ಯುಸಿಯಾಗಿವೆ. ಪಂದ್ಯಾವಳಿಗೆ ಸಿದ್ಧತೆಯ ಭಾಗವಾಗಿ ಬಾಂಗ್ಲಾದೇಶ ತಂಡವೂ ಕೂಡ ಕಠಿಣ ತಾಲೀಮಿನಲ್ಲಿ ತೊಡಗಿದ್ದು, ಈ ನಡುವೆ ಒತ್ತಡ ನಿರ್ವಹಣೆಗೆ ಬಾಂಗ್ಲಾ ತಂಡದ ಯುವ ಆಟಗಾರ ಮೊಹಮ್ಮದ್ ನಯಿಮ್ ಶೇಖ್ ವಿಶೇಷ ತರಬೇತಿ ಪಡೆದಿದ್ದಾರೆ.
ಢಾಕಾದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡ ತರಬೇತಿಯಲ್ಲಿ ನಿರತವಾಗಿದೆ. ತಂಡದ ಯುವ ಆಟಗಾರ ನಯಿಮ್ ಶೇಖ್ ತಾಲೀಮಿನ ವೇಳೆ ಮಾನಸಿಕ ಸದೃಢತೆಗಾಗಿ ಬೆಂಕಿ ಕೆಂಡದ ಮೇಲೆ ನಡೆದಾಡಿದರು. ಸಬಿತ್ ರೆಹಾನ್ ಎಂಬ ತರಬೇತುದಾರನ ಸಹಾಯದೊಂದಿಗೆ ನಯೀಮ್ ಈ ವಿಶಿಷ್ಟ ಕಸರತ್ತು ಮಾಡಿದ್ದಾರೆ. ಮೈದಾನದಲ್ಲಿ ನಯಿಮ್ ಕೆಂಡದ ಮೇಲೆ ನಡೆದಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಂದೆಯೂ ಕೂಡ ವಿಶ್ವದ ಹಲವು ಕ್ರೀಡಾಪಟುಗಳು ಮಾನಸಿಕವಾಗಿ ಬಲಿಷ್ಠಗೊಳ್ಳಲು ಫೈರ್ ವಾಕಿಂಗ್ ಮಾಡಿದ್ದರು ಎಂಬುದು ಗಮನಾರ್ಹ. ಈ ತರಬೇತಿಯು ಆಟಗಾರರ ಮನೋಬಲ ಹೆಚ್ಚಿಸುವುದಲ್ಲದೆ, ಮಾನಸಿಕವಾಗಿ ಸದೃಢರಾಗಲು ನೆರವಾಗುತ್ತದೆ ಎಂದು ತಜ್ಞರೂ ಕೂಡ ಹೇಳುತ್ತಾರೆ.
ತರಬೇತುದಾರ ಸಬಿತ್ ರೆಹಾನ್ ಅವರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಸಂದರ್ಭದಲ್ಲಿ ರಂಗ್ಪುರ್ ರೈಡರ್ಸ್ ತಂಡದ ಆಟಗಾರರಿಗೆ ಮೈಂಡ್ ಟ್ರೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ತಂಡವು ಆಗಸ್ಟ್ 31 ರಂದು ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡದ ವಿರುದ್ಧ ಸೆಣಸಾಡುವ ಮೂಲಕ ಅಭಿಯಾನ ಆರಂಭಿಸಲಿದೆ.