ಚಿತ್ತಗಾಂಗ್ (ಬಾಂಗ್ಲಾದೇಶ): ಬಾಂಗ್ಲಾದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನತ್ತ ದಾಪುಗಾಲು ಇಡುತ್ತಿದೆ. ತನ್ನ ಎರಡನೇ ಇನ್ಸಿಂಗ್ನಲ್ಲಿ 513 ರನ್ಗಳ ಬೃಹತ್ ರನ್ಗಳ ಗೆಲುವಿನ ಗುರಿ ಬೆನ್ನಟ್ಟಿರುವ ಬಾಂಗ್ಲಾ ಇಂದು ನಾಲ್ಕನೇ ದಿನದಾಟಕ್ಕೆ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 272 ರನ್‌ಗಳನ್ನು ಗಳಿಸಿದೆ. ನಾಳೆ ಅಂತಿಮ ದಿನದಾಟದಲ್ಲಿ ಬಾಂಗ್ಲಾ ನಾಲ್ಕು ವಿಕೆಟ್ನಲ್ಲಿ ಇನ್ನೂ 241 ಬಾರಿಸಬೇಕಿದ್ದು, 4 ವಿಕೆಟ್ ಕಬಳಿಸಿದರೆ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ.
ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 404 ರನ್‌ಗಳನ್ನು ಪೇರಿಸಿತ್ತು. ಬಾಂಗ್ಲಾದೇಶ ಕೇವಲ 150 ರನ್ಗಳಿಗೆ ಸರ್ವಪತನ ಕಂಡು ಮೊದಲ ಇನ್ನಿಂಗ್ಸ್ ಮುಗಿಸಿತ್ತು. ಟೀಂ ಇಂಡಿಯಾ ತನ್ನ ಎರಡನೇ ಇನ್ನಿಂಗ್ಸ್ ಅನ್ನು 2 ವಿಕೆಟ್ ನಷ್ಟಕ್ಕೆ 258 ರನ್ಗಳಿಗೆ ಶುಕ್ರವಾರ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ 254 ರನ್ಗಳ ಹಿನ್ನಡೆಯಿಂದಾಗಿ ಬಾಂಗ್ಲಾ ಗೆಲುವಿಗೆ ಒಟ್ಟಾರೆ 513 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು.
ಇದನ್ನೂ ಓದಿ:ಕಮ್ಬ್ಯಾಕ್ ಸೂಚನೆ ಕೊಟ್ಟ ಬುಮ್ರಾ: ಐಪಿಎಲ್ಗೆ ಮಾತ್ರ ಫಿಟ್ ಎಂದ ನೆಟ್ಟಿಗರು
ಶುಕ್ರವಾರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಬಾಂಗ್ಲಾ ಆಟಗಾರರು ದಿನದಾಟ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 42 ರನ್ ಗಳಿಸಿತ್ತು. ಇಂದು ತಮ್ಮ ಆಟ ಆರಂಭಿಸಿದ ನಜ್ಮುಲ್ ಹೊಸೈನ್ ಶಾಂತೋ ಮತ್ತು ಜಾಕೀರ್ ಹಸನ್ ಮೊದಲ ವಿಕೆಟ್ಗೆ 124 ಉತ್ತಮ ಜೊತೆಯಾಟ ನೀಡಿದರು. ಶುಕ್ರವಾರ 25 ರನ್ ಗಳಿಸಿದ್ದ ಹೊಸೈನ್ ಶಾಂತೋ 67 ರನ್ ಬಾರಿಸಿ ಉಮೇಶ್ ಯಾದವ್ ಬೌಲಿಂಗ್ನಲ್ಲಿ ಔಟಾದರು.