ಹೈದರಾಬಾದ್:ಮೊದಲ ಮಹಿಳಾ ಆವೃತ್ತಿಯ ಪ್ರೀಮಿಯರ್ ಲೀಗ್ ಹರಾಜು ನಿನ್ನೆ ನಡೆದಿದೆ. ಭಾರತದ ಬ್ಯಾಟರ್ ಸ್ಮೃತಿ ಮಂಧಾನ ಮಹಿಳಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅತ್ಯಂತ ದುಬಾರಿ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಆಟಗಾರ ಬಾಬರ್ ಅಜಮ್ನ್ನು ಟ್ವಿಟರ್ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಸ್ಮೃತಿ ಮಂಧಾನ ಹೆಸರಿನಲ್ಲಿ ನಿನ್ನೆ ಎರಡು ದಾಖಲೆಗಳು ನಿರ್ಮಾಣ ಆಗಿದೆ. ಮಹಿಳಾ ಮೊದಲ ಆವೃತ್ತಿಯ ಐಪಿಎಲ್ ಹಾರಾಜಿನ ಮೊದಲ ಆಟಗಾರ್ತಿ ಸ್ಮೃತಿ ಮಂಧಾನ. ಮಹಿಳಾ ಆಟಗಾರ್ತಿಯರ ಬಿಡ್ನಲ್ಲಿ ಅತೀ ಹೆಚ್ಚು ಮೌಲ್ಯಕ್ಕೆ ಖರೀದಿಯಾದ ಆಟಗಾರ್ತಿ ಎಂಬ ದಾಖಲೆ ಮಂಧಾನ ಹೆಸರಿಗಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿರೀಕ್ಷೆಯಂತೆ ಮಂಧಾನ ಅವರನ್ನು 3.4 ಕೋಟಿ ಕೊಟ್ಟು ಖರೀದಿ ಮಾಡಿದೆ.
ಮಂಧಾನಗೆ ಆರ್ಸಿಬಿ 3.4 ಕೋಟಿ ಕೊಟ್ಟು ಖರೀದಿ ಮಾಡಿದ ನಂತರ ಟ್ವಿಟರ್ನಲ್ಲಿ ಪಾಕಿಸ್ತಾನದ ಆಟಗಾರ ಬಾಬರ್ ಅಜಮ್ರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಪಾಕಿಸ್ತಾನಿ ಕ್ರಿಕೆಟ್ ಲೀಗ್ನಲ್ಲಿ ಬಾಬರ್ ಅಜಮ್ ಅವರಿಗೆ ಬಿಡ್ ಆದ ಮೊತ್ತ 1.4ಕೋಟಿ. ನಮ್ಮಲ್ಲಿನ ಮಹಿಳಾ ಆಟಗಾರ್ತಿಯರಿಗೆ ಅವರಿಗಿಂತ ಮೂರು ಪಟ್ಟು ಹಣ ಹೆಚ್ಚು ಕೊಡುತ್ತೇವೆ ಎಂದು ಟ್ರೋಲ್ ಮಾಡಲಾಗುತ್ತಿದೆ.
ಇದರ ಜೊತೆಗೆ ಪಾಕಿಸ್ತಾನದಲ್ಲಿ ಆರ್ಥಿಕತೆ ಕುಸಿತಾಗಿರುವುದರ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿದೆ. ಭಾರತೀಯ ಮಹಿಳಾ ಆಟಗಾರ್ತಿಯರ ಬೆಲೆಗಿಂತ ಕಡಿಮೆ ಬೆಲೆಗೆ ಅಜಮ್ ರನ್ನು ಅಲ್ಲಿನ ಪ್ರ್ಯಾಂಚೈಸಿ ಖರೀದಿಸಿದೆ. ಮಂಧಾನ ಅಲ್ಲದೇ ಸುಮಾರು 10ಕ್ಕೂ ಹೆಚ್ಚು ಆಟಗಾರ್ತಿಯರು ಕೋಟಿ ಮೊತ್ತದಲ್ಲಿ ಹರಾಜಿನಲ್ಲಿ ಕೊಳ್ಳಲ್ಪಟ್ಟಿದ್ದಾರೆ.