ಲಾಹೋರ್ (ಪಾಕಿಸ್ತಾನ): ಮಹತ್ವದ ಟೂರ್ನಿಗಳಿಲ್ಲಿ ತಂಡದ ಹಾಗೂ ವೈಯುಕ್ತಿಕ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ತಮ್ಮ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದಾರೆ. ಪಾಕಿಸ್ತಾನದ ಮೂರು ಮಾದರಿಯ ಕ್ರಿಕೆಟ್ನ ಮುಂದಾಳತ್ವ ವಹಿಸಿಕೊಂಡಿದ್ದ ಬಾಬರ್ ಎಲ್ಲದರಿಂದಲೂ ವಿಮುಖರಾಗುವುದಾಗಿ ತಿಳಿಸಿದ್ದಾರೆ. ತಂಡದಲ್ಲಿ ಆಟಗಾರನಾಗಿ ಬಾಬರ್ ಉಳಿಯಲಿದ್ದಾರೆ.
ಬಾಬರ್ ನಿವೃತ್ತಿಯ ಘೋಷಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನೂತನ ನಾಯಕರನ್ನು ನೇಮಕ ಮಾಡಿದೆ. ಟೆಸ್ಟ್ ತಂಡದ ನಾಯಕರಾಗಿ ಶಾನ್ ಮಸೂದ್ ಆಯ್ಕೆ ಆದರೆ, ವೈಟ್ ಬಾಲ್ (ಏಕದಿನ - ಟಿ20) ಕ್ರಿಕೆಟ್ಗೆ ವೇಗಿ ಶಾಹೀನ್ ಶಾ ಅಫ್ರಿದಿ ಅವರನ್ನು ಆಯ್ಕೆ ಮಾಡಿದೆ.
ಏಷ್ಯಾಕಪ್ ಮತ್ತು ವಿಶ್ವಕಪ್‌ನಲ್ಲಿ ಬಾಬರ್ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಏಷ್ಯಾಕಪ್ನಲ್ಲಿ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಹೊರ ಬಿದ್ದರೆ, ವಿಶ್ವಕಪ್‌ನಲ್ಲಿ ಲೀಗ್ ಹಂತದಿಂದಲೇ ಹೊರ ಬಿತ್ತು. ಪಾಕಿಸ್ತಾನದ ಪ್ರದರ್ಶನಕ್ಕೆ ಸ್ವತಃ ಪಾಕ್ ಮಾಜಿ ಆಟಗಾರರೇ ಹಳಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಂತರ ಬಾಬರ್ ಬುಧವಾರ ನಾಯಕತ್ವಕ್ಕೆ ರಾಜಿನಾಮೆ ನೀಡುವುದಾಗಿ ಎಕ್ಸ್ ಆ್ಯಪ್ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡು ತಿಳಿಸಿದ್ದಾರೆ.
ರಾಜೀನಾಮೆ ಪ್ರಕಟಿಸಿದ ಬಾಬರ್:"2019ರಲ್ಲಿ ಪಾಕಿಸ್ತಾನ ಮುನ್ನಡೆಸಲು ನಾನು ಪಿಸಿಬಿಯಿಂದ ಕರೆ ಸ್ವೀಕರಿಸಿದ ಕ್ಷಣವನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಕಳೆದ ನಾಲ್ಕು ವರ್ಷಗಳಲ್ಲಿ, ನಾನು ಮೈದಾನದ ಹೊರಗೆ ಮತ್ತು ಮೈದಾನದ ಒಳಗೆ ಅನೇಕ ಎತ್ತರ - ತಗ್ಗುಗಳನ್ನು ಅನುಭವಿಸಿದ್ದೇನೆ. ಆದರೆ, ನಾನು ಪೂರ್ಣ ಹೃದಯದಿಂದ ಪಾಕಿಸ್ತಾನದ ಹೆಮ್ಮೆಯನ್ನು ಉಳಿಸಿಕೊಳ್ಳುವ ಗುರಿ ಹೊಂದಿದ್ದೇನೆ. ವೈಟ್-ಬಾಲ್ ಮಾದರಿಯಲ್ಲಿ ನಂ.1 ಸ್ಥಾನ ತಲುಪಲು ಆಟಗಾರರು, ತರಬೇತುದಾರರು ಮತ್ತು ನಿರ್ವಹಣಾ ಸಮಿತಿ ಪ್ರಮುಖ ಪಾತ್ರ ವಹಿಸಿದೆ. ಆದರೆ. ಈ ಪ್ರಯಾಣದ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸಲು ನಾನು ಬಯಸುತ್ತೇನೆ" ಎಂದಿದ್ದಾರೆ.
"ಇಂದು, ನಾನು ಎಲ್ಲ ಸ್ವರೂಪಗಳಲ್ಲಿ ಪಾಕಿಸ್ತಾನದ ನಾಯಕನ ಸ್ಥಾನದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರವಾಗಿದೆ, ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನನಗೆ ಈ ಮಹತ್ವದ ಜವಾಬ್ದಾರಿ ವಹಿಸಿಕೊಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಬಾಬರ್ ಅಜಮ್ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನಾಯಕರಾಗಿ ತಂಡವನ್ನು ಏಕದಿನ ಕ್ರಿಕೆಟ್ನ ಐಸಿಸಿ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೆ ಕೊಂಡೊಯ್ಯಯ್ದಿದ್ದರು. ಅಲ್ಲದೇ ಅವರೂ ಸಹ ಏಕದಿನ ಕ್ರಿಕೆಟ್ನ ನಂ.1 ಬ್ಯಾಟರ್ ಆಗಿ ಹೊರಹೊಮ್ಮಿದ್ದರು. ಪಾಕಿಸ್ತಾನ ತಂಡ 2023ರ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ 93 ರನ್ಗಳಿಂದ ಕಳೆದುಕೊಂಡು ತವರಿಗೆ ಮರಳಿತು.
ವಿಶ್ವಕಪ್‌ನಲ್ಲಿ ಕೆಟ್ಟ ಪ್ರದರ್ಶನ:ಸ್ವತಃ ನಾಯಕ ಬಾಬರ್ ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನದೊಂದಿಗೆ ನೀರಸ ಪ್ರದರ್ಶನ ನೀಡಿದ್ದರು. ಬಾಬರ್ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ 40 ಸರಾಸರಿ ಮತ್ತು 82.90 ಸ್ಟ್ರೈಕ್ ರೇಟ್ನೊಂದಿಗೆ ಆಡಿ 320 ರನ್ ಗಳಿಸಿದ್ದರು. ಪಾಕಿಸ್ತಾನದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಆಗಿದ್ದಾರೆ.
ಪಾಕಿಸ್ತಾನ ತಂಡ ವಿಶ್ವಕಪ್ಗೂ ಮುನ್ನ ನಡೆದ ಏಷ್ಯಾಕಪ್ನಲ್ಲೇ ಕೆಟ್ಟ ಪ್ರದರ್ಶನ ನೀಡಿತ್ತು. ನಂತರ ಭಾರತದಲ್ಲಿ ನಡೆದ ವಿಶ್ವಕಪ್‌ನಲ್ಲಿ 9 ಲೀಗ್ ಪಂದ್ಯಗಳಲ್ಲಿ ಕೇವಲ 4ರಲ್ಲಿ ಗೆದ್ದು ಕೊಂಡಿತು. ಆದರೆ ಪಾಕ್ ಗೆದ್ದದ್ದು ನೆದರ್ಲೆಂಡ್ಸ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ. ಕಿವೀಸ್ ಎದುರು ಪಾಕ್ ಮಳೆಯ ನೆರವಿನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಉಳಿದಂತೆ ಮೂರು ದುರ್ಬಲ ತಂಡಗಳನ್ನು ಮಾತ್ರ ಮಣಿಸಿತ್ತು. ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಮಂಡಿಯೂರಿತ್ತು. ಅಲ್ಲದೇ ಅಫ್ಘಾನಿಸ್ತಾನ ತಂಡವೂ ಪಾಕಿಸ್ತಾನವನ್ನು ವಿಶ್ವಕಪ್‌ನಲ್ಲಿ ಸೋಲಿಸಿತು. ಇದರ ಪರಿಣಾಮ ಅಂಕಪಟ್ಟಿಯಲ್ಲಿ 5ನೇ ತಂಡವಾಗಿ ಪಾಕ್ ವಿಶ್ವಕಪ್ ಲೀಗ್ ಹಂತದಿಂದ ಹೊರಬಿತ್ತು.
ಇದನ್ನೂ ಓದಿ:Sachin Tendulkar: ನಿಮ್ಮ ಆಟ ಹೃದಯ ಮುಟ್ಟಿದೆ; "ವಿರಾಟ" ಶತಕಕ್ಕೆ ತಲೆಬಾಗಿದ ಕ್ರಿಕೆಟ್ ದೇವರು