ಮುಲ್ತಾನ್ (ಪಾಕಿಸ್ತಾನ):ಏಕದಿನ ಕ್ರಿಕೆಟ್ನ ನಂಬರ್ 1 ಬ್ಯಾಟರ್ ಪಾಕಿಸ್ತಾನದ ಬಾಬರ್ ಆಜಮ್ ತಮ್ಮ ಅಮೋಘ ಫಾರ್ಮ್ ಮುಂದುವರೆಸಿದ್ದಾರೆ. ಏಷ್ಯಾಕಪ್ನಲ್ಲಿ ನೇಪಾಳ ವಿರುದ್ಧದ ಮೊದಲ ಪಂದ್ಯದಲ್ಲೇ ಅವರು ಏಕದಿನ ಕ್ರಿಕೆಟ್ನ 19ನೇ ಶತಕ ಸಿಡಿಸಿದರು. ಮಹಮ್ಮದ್ ರಿಜ್ವಾನ್ ಮತ್ತು ಇಫ್ತಿಕರ್ ಅಹಮದ್ ಜೊತೆಗೆ ಉತ್ತಮ ಜೊತೆಯಾಟವಾಡಿದ ಬಾಬರ್, 109 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ ಶತಕ ದಾಖಲಿಸಿದರು.
ಬಾಬರ್ ಅವರ 31ನೇ ಅಂತಾರಾಷ್ಟ್ರೀಯ ಶತಕ ಇದಾಗಿದ್ದು, ಏಕದಿನ ಮಾದರಿಯಲ್ಲಿ 19 ಶತಕ ಪೂರೈಸಿದ ವೇಗದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಒಟ್ಟು 31ನೇ ಶತಕದ ಮೂಲಕ ಪ್ರಸ್ತುತ ಆಡುತ್ತಿರುವ ಆಟಗಾರರ ಶತಕದ ಪಟ್ಟಿಯಲ್ಲಿ ಬಾಬರ್ 7ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (76), ಜೋ ರೂಟ್ (46), ವಾರ್ನರ್ (45), ರೋಹಿತ್ ಶರ್ಮಾ (44), ಸ್ಟೀವ್ ಸ್ಮಿತ್ (44), ಕೇನ್ ವಿಲಿಯಮ್ಸನ್ (41) ಬಾಬರ್‌ಗಿಂತ ಮೇಲಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಕ್ಯಾಪ್ಟನ್ ಬಾಬರ್ ಆಜಮ್ ತಮ್ಮ ನಿರ್ಧಾರವನ್ನು ತಾವೇ ರಕ್ಷಿಸಿಕೊಳ್ಳಬೇಕಾಯಿತು. ಕ್ರಿಕೆಟ್ ಶಿಶು ಎಂದೇ ಕರೆಸಿಕೊಳ್ಳುತ್ತಿರುವ ಮತ್ತು ಮೊದಲ ಬಾರಿಗೆ ಏಷ್ಯಾಕಪ್ನಲ್ಲಿ ಸ್ಪರ್ಧಿಸುತ್ತಿರುವ ನೇಪಾಳ 6.1 ಓವರ್ ವೇಳೆಗೆ ಪಾಕಿಸ್ತಾನದ ಎರಡು ಪ್ರಮುಖ ವಿಕೆಟ್ ಪಡೆದುಕೊಂಡಿತು. ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿರುವ ಫಕರ್ ಜಮಾನ್ 20 ಎಸೆತಗಳಲ್ಲಿ 14 ರನ್ ಗಳಿಸಿ ಔಟಾದರೆ, 3ನೇ ರ್ಯಾಂಕಿಂಗ್ನ ಬ್ಯಾಟರ್ ಇಮಾಮ್ ಉಲ್ ಹಕ್ 14 ಎಸೆತಗಳಲ್ಲಿ 5 ರನ್ ಗಳಿಸಿ ರನೌಟ್ಗೆ ಬಲಿಯಾದರು.