ಸೆಂಚುರಿಯನ್:ಬಾಬರ್ ಅಜಮ್ ಅವರ ಸ್ಫೋಟಕ ಶತಕದ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ತಂಡ 204 ರನ್ಗಳ ಬೃಹತ್ ಮೊತ್ತವನ್ನು ಇನ್ನು 2 ಓವರ್ಗಳಿರುವಂತೆ ಚೇಸ್ ಮಾಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ನಲ್ಲಿ 2013ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ 200ರ ಗಡಿ ದಾಟಿತು. 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ಗಳಿಸಿತ್ತು. ಜನ್ನೆಮನ್ ಮಲನ್ 40 ಎಸೆತಗಳಲ್ಲಿ 5 ಬೌಂಡರಿ , 2 ಸಿಕ್ಸರ್ಗಳ ಸಹಿತ 55, ಮ್ಯಾರ್ಕ್ರಮ್ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 63, ಜಾರ್ಜ್ ಲಿಂಡೆ 22, ಡಾಸೆನ್ 34, ಕ್ಲಾಸೆನ್ 15 ರನ್ಗಳಿಸಿದರು.
205 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ 18 ಓವರ್ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಾಯಕ ಬಾಬರ್ ಅಜಮ್ 59 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ 122 ರನ್ಗಳಿಸಿದರು. ಈ ಮೂಲಕ ಪಾಕಿಸ್ತಾನದ ಪರ ಶತಕ ಸಿಡಿಸಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ ಅಜೇಯ 73 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಫಖರ್ ಜಮಾನ್ ಅಜೇಯ 8 ರನ್ಗಳಿಸಿದರು.
ಎರಡು ತಂಡಗಳ ನಡುವಿನ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದೆ. ಶುಕ್ರವಾರ ನಡೆಯಲಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲಿ ಕೊನೆಯ ಅವಕಾಶವಾಗಿದೆ.