ಮುಂಬೈ: 15ನೇ ಆವೃತ್ತಿ ಈಗಾಗಲೇ ಭರ್ಜರಿಯಾಗಿ ಆರಂಭ ಕಂಡು ಮುನ್ನುಗ್ಗುತ್ತಿದೆ. ಎಂದಿನಂತೆ ಈ ಬಾರಿಯೂ ಕೆಲವು ಯುವ ಪ್ರತಿಭೆಗಗಳು ತಂಡದಲ್ಲಿ ಅವಕಾಶ ಪಡೆದಿದ್ದು, ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಹೊಸ ಫ್ರಾಂಚೈಸಿ ಲಖನೌ ಸೂಪರ್ ಜೈಂಟ್ಸ್ ತಂಡದ ಯುವ ಬ್ಯಾಟರ್ ಆಯುಷ್ ಬದೋನಿ ಮತ್ತು ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮಾ ಐಪಿಎಲ್ 2022ರ ಆಕರ್ಷಣೆಯಾಗಿದ್ದಾರೆ.
ಆಯುಷ್ ಬದೋನಿ ಐಪಿಎಲ್ಗೆ ಪದಾರ್ಪಣೆ ಮಾಡುವ ಮುನ್ನ ಟಿ20 ಕ್ರಿಕೆಟ್ನಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿರಲಿಲ್ಲ. ಅವರು 5ರೊಳಗೆ ಒಂದು ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿ ಕೇವಲ 8 ರನ್ಗಳಿಸಿದ್ದರು. ಆದರೆ, ಗೌತಮ್ ಗಂಭೀರ್ ಆತನ ಟ್ರಯಲ್ಸ್ನಲ್ಲಿ ಮೆಚ್ಚಿ ಮೂಲ ಬೆಲೆಗೆ ತಂಡಕ್ಕೆ ಸೇರಿಸಿಕೊಂಡಿದ್ದರು.
ಇದೀಗ ಬದೋನಿ ಆಡಿರುವ 4 ಪಂದ್ಯಗಳಲ್ಲಿ 157ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಕ್ರಮವಾಗಿ 54(41), 19(9), 19(12) ಮತ್ತು 10(3) ರನ್ಗಳಿಸಿದ್ದಾರೆ. ಸಂದರ್ಭದಕ್ಕೆ ತಕ್ಕಂತೆ ಬ್ಯಾಟ್ ಬೀಸುವ ಬದೋನಿ ಮೊದಲ ಪಂದ್ಯದಲ್ಲಿ ತಂಡ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್‌ನಲ್ಲಿ ಅರ್ಧಶತಕ ಸಿಡಿಸಿದರೆ, ಕಳೆದ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಬೌಂಡರಿ ಸಿಕ್ಸರ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದ್ದರು.
ಬದೋನಿಯನ್ನು ಮಿನಿ ಎಬಿಡಿ ಎಂದು ಪ್ರಶಂಸಿಸಿರುವ ತಂಡದ ನಾಯಕ ಕೆಎಲ್ ರಾಹುಲ್ ಹಾಗೂ ಯುವ ಆಟಗಾರನನ್ನು ತಂಡಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಮೆಂಟರ್ ಗಂಭೀರ್ ಮತ್ತಷ್ಟು ಪಂದ್ಯಗಳಲ್ಲಿ ಅವಕಾಶ ನೀಡುವುದಕ್ಕೆ ಉತ್ಸುಕರಾಗಿದ್ದಾರೆ. 15ನೇ ಆವೃತ್ತಿಯ ಐಪಿಎಲ್ ನಲ್ಲಿ ಉದಯಿಸಿರುವ ಮತ್ತೊಂದು ಪ್ರತಿಭೆಯೆಂದರೆ ಮುಂಬೈ ಇಂಡಿಯನ್ಸ್ನ ತಿಲಕ್ ವರ್ಮಾ. ಹೈದರಾಬಾದ್ ತಂಡದ ಪರ ಆಡುವ 2020ರ ಅಂಡರ್ 19 ಸ್ಟಾರ್, ಈ ಬಾರಿ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿದ್ದಾರೆ.
4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಆತ ಆಡಿರುವ 3 ಇನ್ನಿಂಗ್ಸ್ಗಳಲ್ಲಿ 22(15), 61(33) ಮತ್ತು 38(27) ರನ್ಗಳಿಸಿದ್ದಾರೆ. 4 ಮತ್ತು 5ನೇ ಕ್ರಮಾಂಕದಲ್ಲಿ ಯಾವುದಾದರೂ ಹೊಂದಿಕೊಳ್ಳುವ ಯುವ ಆಟಗಾರ ದೊಡ್ಡ ಹೊಡೆತಗಳನ್ನು ಬಾರಿಸುವುದರಲ್ಲಿ ಯಾವುದೇ ಸ್ಟಾರ್ ಆಟಗಾರನಿಗೂ ಕಮ್ಮಿಯೇನಲ್ಲ. 164ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸುತ್ತಿರುವ ಯುವ ಆಟಗಾರ ಈ ಬಾರಿಯ ಉದಯೋನ್ಮುಖ ಆಟಗಾರ ಪ್ರಶಸ್ತಿಯ ರೇಸ್ನಲ್ಲಿದ್ದಾರೆ.
ಇವರಲ್ಲದೆ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಾಡುತ್ತಿರುವ ದರ್ಶನ್ ನಾಲ್ಕಂಡೆ, ಜಿತೇಶ್ ಶರ್ಮಾ ಕೂಡ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಐಪಿಎಲ್ ಕೇವಲ ಶ್ರೀಮಂತ ಕ್ರಿಕೆಟ್ ಲೀಗ್ ಮಾತ್ರವಲ್ಲ, ಪ್ರತಿಭೆಗಳನ್ನು ಹೊರ ತೆಗೆಯುವ ಒಂದು ಅದ್ಭುತ ಕ್ರಿಕೆಟ್ ಲೀಗ್ ಎನ್ನುವುದಕ್ಕೆ ಈ ಆಟಗಾರರು ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ:ಧೋನಿ ಸಾಧನೆಯನ್ನು ಸರಿಗಟ್ಟಿದ ತೆವಾಟಿಯಾ.. ಯಾವ ದಾಖಲೆ ಅದು?