ಮೆಲ್ಬರ್ನ್: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 13 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಿಂದ ದೂರ ಸರಿಯುತ್ತಿರುವುದಾಗಿ ಪ್ರಕಟಿಸಿದರು.
ಕ್ರಿಕೆಟ್‌ನಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಳ್ಳುವುದು ಕಷ್ಟಕರವಾಗಿತ್ತು. ಆದರೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಅದೃಷ್ಟಶಾಲಿ. ಹೊಸ ವಿಚಾರಗಳೆಡೆಗೆ ಮುಂದುವರಿಯಲು ಇದು ಸಕಾಲ. ನನ್ನ ಸಾಧನೆಗಳ ಬಗ್ಗೆ ಹೆಮ್ಮೆ ಇದೆ. ಸಹ ಆಟಗಾರರೊಂದಿಗೆ ಹಂಚಿಕೊಂಡ ಕ್ಷಣಗಳೂ ಬದುಕಿನುದ್ದಕ್ಕೂ ಇರುತ್ತವೆ ಎಂದರು.
2022ರಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ ಮೆಗ್ ಲ್ಯಾನಿಂಗ್ ಕ್ರಿಕೆಟ್‌ನಿಂದ ಆರು ತಿಂಗಳ ವಿರಾಮ ಪಡೆದುಕೊಂಡು ಚಿಕಿತ್ಸೆ ಪಡೆದಿದ್ದರು. ಈ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್, ಮೆಗ್ ಲ್ಯಾನಿಂಗ್ ತಂಡಕ್ಕೆ ಮರಳಿ ಬರುತ್ತಾರೆ ಎಂದು ಹೇಳಿತ್ತು.
18 ವರ್ಷ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕಾಲಿಟ್ಟ ಲ್ಯಾನಿಂಗ್, 2010ರಲ್ಲಿ ಚೊಚ್ಚಲ ಟಿ-20 ಪಂದ್ಯ ಆಡಿದ್ದರು. 2014ರಲ್ಲಿ ಜೋಡಿ ಫೀಲ್ಡ್ಸ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ಲ್ಯಾನಿಂಗ್ ಆಸ್ಟ್ರೇಲಿಯಾ ತಂಡದ ನಾಯಕಿಯಾದರು. ಈ ಹಂತದಿಂದ ಆಸ್ಟ್ರೇಲಿಯಾ ಮಹಿಳಾ ತಂಡವು ಅನೇಕ ಬದಲಾವಣೆಗಳೊಂದಿಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು. ಮೆಗ್ ಲ್ಯಾನಿಂಗ್ ಆಸ್ಟ್ರೇಲಿಯಾ ಮಹಿಳಾ ತಂಡದ ಯಶಸ್ವಿ ನಾಯಕಿಯಾಗಿ ಹೊರಹೊಮ್ಮಿದರು.
132 ಅಂತರರಾಷ್ಟ್ರೀಯ ಟಿ-20 ಪಂದ್ಯಗಳು, 103 ಏಕದಿನ ಪಂದ್ಯಗಳು ಮತ್ತು 6 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಲ್ಯಾನಿಂಗ್ ಪ್ರತಿನಿಧಿಸಿದ್ದಾರೆ. ನಾಯಕಿಯಾಗಿ 78 ಏಕದಿನ ಪಂದ್ಯಗಳನ್ನಾಡಿದ್ದು, 69 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. 100 ಟಿ-20ಗಳಲ್ಲಿ 76 ಗೆಲುವು ಮತ್ತು 7 ಟೆಸ್ಟ್ ಗೆಲುವುಗಳು ಒಳಗೊಂಡಿವೆ. ಒಟ್ಟು 7 ವಿಶ್ವಕಪ್ ಗೆದ್ದಿರುವ ಲ್ಯಾನಿಂಗ್ ನಾಯಕಿಯಾಗಿ, ನಾಲ್ಕು ಬಾರಿ ಟಿ-20 ವಿಶ್ವಕಪ್ ಪ್ರಶಸ್ತಿ, ಒಂದು ಏಕದಿನ ವಿಶ್ವಕಪ್ ಮತ್ತು ಕಳೆದ ವರ್ಷ ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ಗೆಲ್ಲುವ ಮೂಲಕ ತಂಡವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಹಿರಿಮೆ ಹೊಂದಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ನಂತರ ಲ್ಯಾನಿಂಗ್ ಹಲವು ಕ್ರಿಕೆಟ್ ಸರಣಿಗಳನ್ನು ಆಡಲಿಲ್ಲ. ಈ ವರ್ಷ ಇಂಗ್ಲೆಂಡ್, ಐರ್ಲೆಂಡ್ ಪ್ರವಾಸಗಳು ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ತವರು ಸರಣಿಗಾಗಿ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಅನಾರೋಗ್ಯದಿಂದಾಗಿ ಆರು ತಿಂಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ಅಲಿಸ್ಸಾ ಹೀಲಿ ಅವರನ್ನು ಹಂಗಾಮಿ ನಾಯಕಿಯನ್ನಾಗಿ ಮಾಡಲಾಗಿತ್ತು. 2023ರಲ್ಲಿ ನಡೆದ ಮೊದಲ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವಲ್ಲಿ ಲ್ಯಾನಿಂಗ್ ಯಶಸ್ವಿಯಾಗಿದ್ದರು.
ಕೇವಲ ನಾಯಕತ್ವದಿಂದಲ್ಲದೇ, ತನ್ನ ಕ್ಲಾಸಿಕ್ ಬ್ಯಾಟಿಂಗ್ನಿಂದಲೂ ಎಲ್ಲರ ಗಮನ ಸೆಳೆದಿದ್ದ ಲ್ಯಾನಿಂಗ್, ಏಕದಿನ ಕ್ರಿಕೆಟ್ನಲ್ಲಿ 15 ಶತಕಗಳೊಂದಿಗೆ 4,602 ರನ್ ಹಾಗು ಟಿ-20ಯಲ್ಲಿ 2 ಶತಕ ಒಳಗೊಂಡಂತೆ 3,405 ರನ್ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ:ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಫೀಲ್ಡರ್ ನಿಲ್ಲಿಸುವ ಅವಕಾಶ ಇರಬೇಕಿತ್ತು: ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಬಗ್ಗೆ ಅಫ್ಘಾನ್ ಕೋಚ್ ಮಾತು