ನವದೆಹಲಿ: ಫೆ.10ರಂದು ಆರಂಭವಾದ 8ನೇ ಮಹಿಳಾ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಫೆ.26ರಂದು ಮುಕ್ತಾಯಗೊಂಡಿದೆ. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 19 ರನ್‌ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
ಆಲ್ ರೌಂಡರ್ ಆಶ್ಲೇ ಗಾರ್ಡ್ನರ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿ ಪಡೆದರು. ಆಶ್ಲೇ ವಿಶ್ವಕಪ್‌ನಲ್ಲಿ 110 ರನ್ ಗಳಿಸಿ 10 ವಿಕೆಟ್ ಪಡೆದರು. ವಿಶ್ವಕಪ್‌ನಲ್ಲಿ ಹೆಚ್ಚು ರನ್ ಮತ್ತು ವಿಕೆಟ್ ಪಡೆದ ಆಟಗಾರ್ತಿಯರ ಬಗ್ಗೆ ನೋಡಿದಾಗ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಪ್ಲೇಯರ್ಗಳು ಇದ್ದಾರೆ. ಆಸ್ಟ್ರೇಲಿಯಾ ವನಿತೆಯರು ಆರನೇ ಬಾರಿಗೆ ಟಿ20 ವಿಶ್ವ ಕಪ್ ಗೆದ್ದರೆ ನಾಯಕಿ ಮೆಗ್ ಲ್ಯಾನಿಂಗ್ ಐದು ಐಸಿಸಿ ಟೈಟಲ್ ಗೆದ್ದು ಪುರುಷ ವಿಭಾಗದ ನಾಯಕರ ದಾಖಲೆಯನ್ನೂ ಮುರಿದಿದ್ದಾರೆ.
ಐಸಿಸಿ ಹೆಚ್ಚು ಟೈಟಲ್ ಗೆದ್ದ ಮೆಗ್ ಲ್ಯಾನಿಂಗ್:ನಾಲ್ಕು ಟಿ20 ಮತ್ತು ಒಂದು ಏಕದಿನ ವಿಶ್ವಕಪನ್ನು ಆಸ್ಟ್ರೇಲಿಯಾ ನಾಯಕಿ ಮೆಗ್ ಲ್ಯಾನಿಂಗ್ ಗೆದ್ದಿದ್ದಾರೆ. 2023 ಸೇರಿದಂತೆ 2014, 2018 ಮತ್ತು 2020ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ನಾಯಕಿಯಾಗಿದ್ದರು ಮತ್ತು 2022ರ ಏಕದಿನ ವಿಶ್ವಕಪ್ ತಂಡದ ನಾಯಕತ್ವವನ್ನು ವಹಿಸಿದ್ದರು. ಈ ಮೂಲಕ ಲ್ಯಾನಿಂಗ್ ಆಸ್ಟ್ರೇಲಿಯಾದ ಬ್ಯಾಟರ್ ರಿಕಿ ಪಾಂಟಿಂಗ್ ಅವರ ದಾಖಲೆ ಮುರಿದಿದ್ದಾರೆ.
ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ಪುರುಷರ ತಂಡ 2003 ಮತ್ತು 2007 ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಮತ್ತು 2006 ಮತ್ತು 2009 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವು ಸಾಧಿಸಿತ್ತು. ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೆನ್ ಬ್ಲೂ ತಂಡ 3 ಐಸಿಸಿ ಟೈಟಲ್ ಗೆದ್ದುಕೊಂಡಿದೆ. 2007ರ ಮೊದಲ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗೆಲುವು ಸಾಧಿಸಿದ್ದರು. ಎಲ್ಲಾ ಐಸಿಸಿ ಟೈಟಲ್ ಗೆದ್ದ ನಾಯಕ ಎಂಬ ಖ್ಯಾತಿಗೂ ಧೋನಿ ಪಾತ್ರರಾಗಿದ್ದರು (ಧೋನಿ ನಾಯಕತ್ವದ ಸಂದರ್ಭದಲ್ಲಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗಿರಲಿಲ್ಲ).