ಹೈದರಾಬಾದ್:2022ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಟಾರ್ ಆಟಗಾರರ ಖರೀದಿಸುವ ಯೋಜನೆಯಲ್ಲಿದ್ದ 10 ಫ್ರಾಂಚೈಸಿಗಳಿಗೆ ಆಸ್ಟ್ರೇಲಿಯಾ ಆಟಗಾರರ ಅಲಭ್ಯತೆ ದೊಡ್ಡ ಆಘಾತ ತಂದಿದೆ. 47 ಆಟಗಾರರು ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಇದರಲ್ಲಿ ಪ್ರಮುಖ ಆಟಗಾರರು ಐಪಿಎಲ್ ವೇಳೆ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದರಿಂದ ಫ್ರಾಂಚೈಸಿ ಮಾಲೀಕರಿಗೆ ದೊಡ್ಡ ತಲೆನೋವು ತಂದಿದೆ.
2 ಹೊಸ ತಂಡಗಳು ಸೇರ್ಪಡೆಯೊಡನೆ ಶ್ರೀಮಂತ ಕ್ರಿಕೆಟ್ ಲೀಗ್ 74 ಪಂದ್ಯಗಳಿಗೆ ಏರಿಕೆಯಾಗಿದೆ. ಹಾಗಾಗಿ ಈ ಟೂರ್ನಮೆಂಟ್ 2 ತಿಂಗಳ ಅವಧಿಯಲ್ಲಿ ನಡೆಯಲಿದೆ. ಮೆಗಾ ಹರಾಜಿಗೆ ಮೂರು ದಿನಗಳಿರುವಾಗ ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್ಗಾಗಿ ನಮ್ಮ ಯಾವುದೇ ಆಟಗಾರರನ್ನು ರಾಷ್ಟ್ರೀಯ ಕರ್ತವ್ಯವನ್ನು ತ್ಯಜಿಸಲು ಬಿಡುವುದಿಲ್ಲ ಎಂದು ತಿಳಿಸಿದೆ.
ಆಸ್ಟ್ರೇಲಿಯಾ ತಂಡ ಮಾರ್ಚ್ ಮತ್ತು ಏಪ್ರಿಲ್ ವೇಳೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 3 ಏಕದಿನ, 3 ಟೆಸ್ಟ್ ಮತ್ತು ಒಂದು ಟಿ-20 ಪಂದ್ಯವನ್ನಾಡಲಿದೆ. ಈ ಪ್ರವಾಸಕ್ಕೆ ಆಸ್ಟ್ರೇಲಿಯಾ ಆಯ್ಕೆಗಾರರು ಸಂಪೂರ್ಣ ಬಲಿಷ್ಠ ತಂಡವನ್ನು ಆಯ್ಕೆ ಮಾಡಿರುವುದು ಐಪಿಎಲ್ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವು ತಂದಿದೆ.