ಮೆಲ್ಬೋರ್ನ್:ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಫಾಕ್ಸ್ ಕ್ರಿಕೆಟ್ ವರದಿ ಮಾಡಿದ್ದು, ಥಾಯ್ಲೆಂಡ್‌ನಲ್ಲಿ ಸಾವನ್ನಪ್ಪಿದ್ದಾರೆಂಬ ಮಾಹಿತಿ ನೀಡಿದೆ.
ಥಾಯ್ಲೆಂಡ್‌ನ ವಿಲ್ಲಾವೊಂದರಲ್ಲಿ ಶೇನ್ ವಾರ್ನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಕೂಡ ಅವರು ಬದುಕುಳಿಯಲಿಲ್ಲ ಎಂದು ವಾರ್ನ್ ಆಪ್ತ ವಲಯ ತಿಳಿಸಿದೆ. ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಆಗಿದ್ದ ಶೇನ್ ವಾರ್ನ್ ಕ್ರಿಕೆಟ್ ಜಗತ್ತಿನಲ್ಲೇ ತಮ್ಮದೇ ಆದ ಛಾಪು ಮೂಡಿಸಿದ್ದರು.
ಭಾರತದ ವಿರುದ್ಧ ಟೆಸ್ಟ್ಗೆ ಪದಾರ್ಪಣೆ:ಶೇನ್ ವಾರ್ನ್ 1992ರಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಮೊದಲ ಟೆಸ್ಟ್ನಲ್ಲಿ ಎರಡು ವಿಕೆಟ್ ಪಡೆದಿದ್ದ ಇವರು ತದನಂತರದ ದಿನಗಳಲ್ಲಿ ಬ್ಯಾಟ್ಸ್ಮನ್ಗಳಿಗೆ ತಮ್ಮ ಮಾರಕ ಸ್ಪಿನ್ ಮೋಡಿಯಿಂದ ದುಸ್ವಪ್ನವಾಗಿ ಕಾಡಿದ್ದರು. 16 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ವಾರ್ನ್ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಸಾಲಿನಲ್ಲಿ ಒಬ್ಬರು. ಆಸ್ಟ್ರೇಲಿಯಾ ಪರ 145 ಟೆಸ್ಟ್, 194 ಏಕದಿನ ಪಂದ್ಯಗಳನ್ನಾಡಿರುವ ಇವರು, ಕ್ರಮವಾಗಿ 708, 293 ವಿಕೆಟ್ ಪಡೆದಿದ್ದಾರೆ.
145 ಟೆಸ್ಟ್ ಪಂದ್ಯಗಳಿಂದ 708 ವಿಕೆಟ್ ಪಡೆದು ಶ್ರೀಲಂಕಾದ ದಂತಕಥೆ ಮುತ್ತಯ್ಯ ಮುರಳೀಧರನ್ ನಂತರದ 2ನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. 1999ರ ವಿಶ್ವಕಪ್ ಫೈನಲ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಶೇನ್ ವಾರ್ನ್ ನಿವೃತ್ತಿ ಪಡೆದುಕೊಂಡಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದಾನೆ.
ಆಸ್ಟ್ರೇಲಿಯಾ ಪಾಲಿಗೆ ಕರಾಳ ಶುಕ್ರವಾರ:ಆಸ್ಟ್ರೇಲಿಯಾದ ಪಾಲಿಗೆ ಮಾರ್ಚ್ 4ರ ಶುಕ್ರವಾರ ಕರಾಳವಾಗಿದ್ದು, ಇಂದು ಬೆಳಗ್ಗೆ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಅವರನ್ನು ಕಳೆದುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಅವರನ್ನು ಕಳೆದುಕೊಂಡಿದೆ.