ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕಿ ಮೆಗ್ ಲ್ಯಾನಿಂಗ್ ನಿವೃತ್ತಿಯ ನಂತರ ವನಿತೆಯರ ಕಾಂಗರೂ ಪಡೆ ಭಾರತ ಪ್ರವಾಸ ಕೈಗೊಳ್ಳುತ್ತಿದೆ. ಈ ಪ್ರವಾಸಕ್ಕೆ 16 ಜನ ಆಟಗಾರ್ತಿಯರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ. ಆದರೆ, ತಂಡದ ಮುಂದಾಳತ್ವವನ್ನು ಯಾರು ವಹಿಸಲಿದ್ದಾರೆ ಎಂಬುದು ಇನ್ನು ತಿಳಿಸಿಲ್ಲ. ಭಾರತಕ್ಕೆ ತಂಡ ಬಂದಿಳಿಯುವ ಮೊದಲು ಪ್ರಕಟಿತ ತಂಡದಲ್ಲಿ ಒಬ್ಬರಿಗೆ ಮುಂದಾಳ್ವದ ಜವಾಬ್ದಾರಿ ನೀಡುವ ನಿರೀಕ್ಷೆ ಇದೆ.
ಆಸ್ಟ್ರೇಲಿಯಾದ ಮಹಿಳಾ ತಂಡದಲ್ಲಿ ಸ್ಟಾರ್ ವಿಕೆಟ್ ಕೀಪರ್ - ಬ್ಯಾಟರ್ ಅಲಿಸ್ಸಾ ಹೀಲಿ ಮತ್ತು ಎಡಗೈ ವೇಗಿ ಲಾರೆನ್ ಚೀಟಲ್ ಸ್ಥಾನ ಪಡೆದಿದ್ದಾರೆ. ಎಡಗೈ ವೇಗದ ಬೌಲರ್ ಲಾರೆನ್ ಚೀಟಲ್ ಗಾಯದಿಂದ ಚೇತರಿಸಿಕೊಂಡು ನಾಲ್ಕು ವರ್ಷಗಳ ನಂತರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದ್ದಾರೆ. ಆದರೆ, ಅವರು ನಡೆಯಲಿರುವ ಏಕೈಕ ಟೆಸ್ಟ್ಗೆ ಮಾತ್ರ ಆಯ್ಕೆ ಆಗಿದ್ದಾರೆ. ಲಾರೆನ್ ಚೀಟಲ್ ಇತ್ತೀಚೆಗೆ ನಡೆದ ವನಿತೆಯರ ಬಿಗ್ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ 19 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಫಿಟ್ನೆಸ್ ಸಾಬೀತು ಪಡಿಸಿದ್ದಾರೆ.
2023 ಡಿಸೆಂಬರ್ 21 ರಿಂದ ಪಂದ್ಯಗಳು ಆರಂಭವಾಗಲಿದ್ದು, 2024 ಜನವರಿ 9ರ ವರೆಗೆ ಪಂದ್ಯಗಳು ನಡೆಯಲಿದೆ. ಒಂದು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳು ನಡೆಯಲಿದೆ. ಟೆಸ್ಟ್ ಪಂದ್ಯ ಹಾಗೂ ಏಕದಿನ ಪಂದ್ಯಗಳು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ಟಿ-20 ಪಂದ್ಯಗಳು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿದೆ.
"ಲಾರೆನ್ ಚೀಟಲ್ ಗಾಯದಿಂದ ಚೇತರಿಸಿಕೊಂಡಿದ್ದು, ಕಳೆದ ಆರು ತಿಂಗಳು ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಪಡೆಯಲು ಸಂಪೂರ್ಣ ಫಿಟ್ ಆಗಿದ್ದಾರೆ. ಲಾರೆನ್ ಅವರು ಭಾರತದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ತಂಡಕ್ಕೆ ಹೆಚ್ಚುವರಿ ವೇಗದ ಬೌಲಿಂಗ್ ಆಯ್ಕೆ ಆಗಿರುತ್ತಾರೆ. ಅವರನ್ನು ಸದ್ಯ ಟೆಸ್ಟ್ ತಂಡಕ್ಕೆ ಮಾತ್ರ ಆಯ್ಕೆ ಮಾಡಲಾಗಿದೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಮುಖ್ಯಸ್ಥೆ ಮತ್ತು ರಾಷ್ಟ್ರೀಯ ತಂಡದ ಆಯ್ಕೆಗಾರ್ತಿ ಶಾನ್ ಫ್ಲೆಗ್ಲರ್ ತಿಳಿಸಿದ್ದಾರೆ.
ಗಾಯಕ್ಕೆ ತುತ್ತಾಗಿರುವ ಅಲಿಸ್ಸಾ ಹೀಲಿ ಭಾರತ ಪ್ರವಾಸದ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾಯಿ ಕಚ್ಚಿದ ಪರಿಣಾಮ ಹೀಲಿ ಇತ್ತೀಚೆಗೆ ಬೆರಳಿಗೆ ಗಾಯ ಮಾಡಿಕೊಂಡಿದ್ದರು ಮತ್ತು ವೈದ್ಯಕೀಯ ತಂಡವು ಆಕೆಯ ಮೇಲೆ ನಿಗಾ ಇರಿಸಿದೆ. ಅಲಿಸ್ಸಾ ಹೀಲಿ ಅವರ ಬೆರಳು ವಾಸಿಯಾಗುತ್ತಿದೆ. ನಿಸ್ಸಂಶಯವಾಗಿ ಹೀಲಿ ಟೆಸ್ಟ್ ಪಂದ್ಯದ ವೇಳೆಗೆ ತಂಡಕ್ಕೆ ಮರಳಲಿದ್ದಾರೆ" ಎಂದು ತಿಳಿಸಿದರು.
ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ಮಹಿಳಾ ತಂಡ: ಡಾರ್ಸಿ ಬ್ರೌನ್, ಲಾರೆನ್ ಚೀಟಲ್ (ಟೆಸ್ಟ್ ಮಾತ್ರ), ಹೀದರ್ ಗ್ರಹಾಂ, ಆಶ್ಲೀಗ್ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್ (ಟಿ20 ಮಾತ್ರ), ಅಲಿಸ್ಸಾ ಹೀಲಿ, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ತಹ್ಲಿಯಾ ಮೆಕ್‌ಗ್ರಾತ್, ಬೆತ್ ಮೂನಿ, ಎಲಿಸೆ ಪೆರಿ , ಮೇಗನ್ ಶುಟ್, ಅನ್ನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್.
ಇದನ್ನೂ ಓದಿ:ಭಾರತ-ನ್ಯೂಜಿಲೆಂಡ್ ಹಣಾಹಣಿಗೆ ರಾಡ್ ಟಕರ್; ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ ಪಂದ್ಯಕ್ಕೆ ಮೆನನ್ ಫೀಲ್ಡ್ ಅಂಪೈರ್