ಮೆಕಾಯ್(ಆಸ್ಟ್ರೇಲಿಯಾ): ಕೊನೆ ಓವರ್ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 13ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್ ಮಾಡಲು ಕಣಕ್ಕಿಳಿದ ಟೀಂ ಇಂಡಿಯಾ ವೇಗಿ ಜೂಲನ್ ಗೋಸ್ವಾಮಿ ಎರಡು 'ನೋ ಬಾಲ್' ಎಸೆಯುವ ಮೂಲಕ ತಂಡಕ್ಕೆ ವಿಲನ್ ಆದರು. ಪರಿಣಾಮ ಟೀಂ ಇಂಡಿಯಾ ಸೋಲು ಕಾಣುವ ಮೂಲಕ ಮತ್ತೊಂದು ಸರಣಿ ಕೈಚೆಲ್ಲಿದೆ.
ಆಸ್ಟ್ರೇಲಿಯಾದ ಮೆಕಾಯ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತೀಯ ವನತೆಯರ ತಂಡ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರ 86ರನ್ ಹಾಗೂ ರಿಚಾ ಘೋಷ್ ಅವರ 44ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 274ರನ್ಗಳಿಕೆ ಮಾಡಿತು.
ಇದರ ಬೆನ್ನತ್ತಿದ್ದ ಆಸ್ಟ್ರೇಲಿಯಾ ಮೊದಲ ಓವರ್ನಲ್ಲಿ ಆರಂಭಿಕ ಬ್ಯಾಟರ್ ಅಲಿಸಾ ಹೀಲಿ ಸೊನ್ನೆ ಸುತ್ತಿದರು. ಆದರೆ ಮತ್ತೋರ್ವ ಆಟಗಾರ್ತಿ ಬೆತ್ ಮೂನಿ ಅಜೇಯ 125ರನ್,ಮೆಗ್ರಾಥ್ 74ರನ್ಗಳಿಕೆ ಮಾಡಿ ತಂಡ ಗೆಲುವಿನ ದಡ ಸೇರುವಂತೆ ಮಾಡಿದರು. ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 275ರನ್ಗಳಿಸಿ ಗೆಲುವಿನ ನಗೆ ಬೀರಿದೆ.
ಟೀಂ ಇಂಡಿಯಾ ಮೇಲಿಂದ ಮೇಲೆ ಎದುರಾಳಿ ತಂಡದ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೂ ಕೂಡ ಕೊನೆ ಓವರ್ನಲ್ಲಿ ವೈಫಲ್ಯ ಕಂಡು ಸೋಲು ಕಾಣುವಂತಾಯಿತು. ತಂಡಕ್ಕೆ ಅಂತಿಮ ಓವರ್ನಲ್ಲಿ 13ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಗೋಸ್ವಾಮಿ ಎರಡು ನೋ ಬಾಲ್ ಎಸೆದು 13ರನ್ ಬಿಟ್ಟುಕೊಟ್ಟ ಪರಿಣಾಮ ಭಾರತ ಸೋಲು ಕಾಣುವಂತಾಯಿತು.