ಗುವಾಹಟಿ (ಅಸ್ಸೋಂ):ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಗೆಲುವು ಸಾಧಿಸಿದೆ. ಆರಂಭಿಕ ಎರಡು ಪಂದ್ಯಗಳನ್ನು ಗೆದ್ದು ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಮೂರನೇ ಪಂದ್ಯ ಸೋಲು ಕಂಡಿದೆ. ಈ ಮೂಲಕ 2-1ರಿಂದ ಕಾಂಗರೂ ಪಡೆ ಸರಣಿಯ ಆಸೆ ಜೀವಂತ ಇರಿಸಿಕೊಂಡಿದೆ.
ಅಸ್ಸೋಂನ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ರಂಭಿಕ ರುತುರಾಜ್ ಗಾಯಕ್ವಾಡ್ ಅಜೇಯ ಸ್ಫೋಟಕ ಶತಕ (123 ರನ್)ದ ನೆರವಿನೊಂದಿಗೆ 20 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 222 ರನ್‌ಗಳನ್ನು ಕಲೆ ಹಾಕಿತ್ತು. 223 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ್ದ ಆಸೀಸ್ ತಂಡ 6.2 ಓವರ್ಗಳಲ್ಲಿ 68 ರನ್ ಆಗುವಷ್ಟರಲ್ಲಿ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆರನ್ ಹಾರ್ಡಿ 16 ರನ್, ಟ್ರಾವಿಸ್ ಹೆಡ್ 35 ರನ್ ಹಾಗೂ ಜೋಶ್ ಇಂಗ್ಲಿಸ್ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ, ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ನಡುವೆ ಮಾರ್ಕಸ್ ಸ್ಟೊಯಿನಿಸ್ 17 ರನ್, ಟಿಮ್ ಡೇವಿಡ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಹೊಡಿಬಡಿ ಆಟಕ್ಕೆ ಮುಂದಾದ ಮ್ಯಾಕ್ಸ್‌ವೆಲ್ ಕೇವಲ 48 ಎಸೆತಗಳಲ್ಲಿ 104 ಬಾರಿಸಿ ಕೊನೆಯ ಎಸೆತದಲ್ಲಿ ಪಂದ್ಯ ಗೆಲ್ಲಿಸಿದರು. ಅವರ ಅಜಯೇ ಸ್ಪೋಟಕ ಬ್ಯಾಟಿಂಗ್ನಲ್ಲಿ ತಲಾ ಎಂಟು ಸಿಕ್ಸರ್ಗಳು ಹಾಗೂ ಬೌಂಡರಿಗಳು ಒಳಗೊಂಡಿದ್ದವು. ನಾಯಕ ಮ್ಯಾಥ್ಯೂ ವೇಡ್ ಅಜೇಯ 21 ರನ್ ಕಲೆ ಹಾಕಿದರು. ಭಾರತದ ಪರ ರವಿ ಬಿಷ್ಣೋಯ್ 2 ವಿಕೆಟ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಗಾಯಕ್ವಾಡ್ ಶತಕ ವ್ಯರ್ಥ:ಇದಕ್ಕೂ ಮುನ್ನ ಭಾರತಬ್ಯಾಟಿಂಗ್ ಮಾಡಿ ಆರಂಭಿಕ ಆಘಾತ ಅನುಭವಿಸಿತ್ತು. ಯಶಸ್ವಿ ಜೈಸ್ವಾಲ್ ಕೇವಲ 6 ರನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಇಶಾನ್ ಕಿಶನ್ ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಈ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಆರಂಭಿಕ ರುತುರಾಜ್ ಗಾಯಕ್ವಾಡ್ ಜೊತೆಗೂಡಿದರು. ಸೂರ್ಯ 29 ಎಸೆತಗಳಲ್ಲಿ ಎರಡು ಸಿಕ್ಸರ್, ಐದು ಬೌಂಡರಿಗಳೊಂದಿಗೆ 39 ರನ್ ಬಾರಿಸಿದರು. ನಾಯಕ ಸೂರ್ಯ ನಿರ್ಗಮಿಸುವ ಮೊದಲು ಈ ಜೋಡಿ 57 ರನ್‌ಗಳನ್ನು ಪೇರಿಸಿತು. ಮತ್ತೊಂದೆಡೆ, ಗಾಯಕ್ವಾಡ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.