ತಿರುವನಂತಪುರಂ(ಕೇರಳ): ಯುವ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಹಾಗೂ ಇಶಾನ್ ಕಿಶನ್ ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾಕ್ಕೆ 236 ರನ್ಗಳ ಬೃಹತ್ ಗೆಲುವಿನ ಗುರಿ ನೀಡಿದೆ. ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ ನ್ಯಾಷನಲ್ ಮೈದಾನದಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಮ್ಯಾಥ್ಯೂ ವೇಡ್ ಟೀಂ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು.
ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾಕ್ಕೆ ಯುವ ಎಡಗೈ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಬ್ಬರದ ಆರಂಭ ಒದಗಿಸಿದರು. ಆಸೀಸ್ ಬೌಲರ್ಗಳ ಬೆವರಿಳಿಸಿದ ಜೈಸ್ವಾಲ್ ಬೌಂಡರಿ, ಸಿಕ್ಸರ್ ಚಚ್ಚಿದರು. 24 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಅವರು, 25 ಬಾಲ್ಗಳಲ್ಲಿ 53 ರನ್ ಬಾರಿಸಿ ಔಟಾದರು. ಆರಂಭಿಕ ಜೋಡಿ 5.5 ಓವರ್ಗಳಲ್ಲಿ 77 ರನ್ ಸೇರಿಸಿತು. ಯಶಸ್ವಿಗೆ ರುತುರಾಜ್ ಗಾಯಕ್ವಾಡ್ ತಕ್ಕ ಸಾಥ್ ನೀಡಿದರು.
ಯಶಸ್ವಿ ಬಳಿಕ ಕ್ರೀಸ್ಗೆ ಬಂದ ಕಿಶನ್ ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರೂ ಸಹ ಬಳಿಕ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕಿಶನ್ 32 ಎಸೆತಗಳಲ್ಲಿ 52 ರನ್ ಸಿಡಿಸಿ ಸ್ಟೋಯ್ನಿಸ್ ಬೌಲಿಂಗ್ನಲ್ಲಿ ಎಲ್ಲಿಸ್ಗೆ ಕ್ಯಾಚ್ ನೀಡಿ ಔಟಾದರು. ಅವರ ಇನ್ನಿಂಗ್ಸ್ನಲ್ಲಿ ಮೂರು ಬೌಂಡರಿ ಹಾಗೂ 4 ಸಿಕ್ಸರ್ ಮೂಡಿಬಂದವು.
ನಂತರ ಮೈದಾನಕ್ಕಿಳಿದ ನಾಯಕ ಸೂರ್ಯಕುಮಾರ್ ಯಾದವ್ ಸಿಕ್ಸರ್ನಿಂದಲೇ ಆಟ ಆರಂಭಿಸಿದರು. ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲದಿದ್ದರೂ ಸಹ ತಾವಾಡಿದ 10 ಎಸೆತಗಳಲ್ಲಿ ಎರಡು ಸಿಕ್ಸರ್ಗಳೊಂದಿಗೆ 19 ರನ್ ಬಾರಿಸಿ ಸ್ಟೋಯ್ನಿಸ್ ಪಡೆದ ಅದ್ಭುತ ಕ್ಯಾಚ್ಗೆ ಬಲಿಯಾದರು. ನಾಯಕನ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ಯುವ ಬ್ಯಾಟರ್ ರಿಂಕು ಸಿಂಗ್ ಕೆಲ ಆಕರ್ಷಕ ಹೊಡೆತಗಳ ಮೂಲಕ ರನ್ ಗತಿ ಹೆಚ್ಚಿಸಿದರು.