ಲಖನೌ (ಉತ್ತರ ಪ್ರದೇಶ): ಆರಂಭಿಕ 125 ರನ್ನ ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಪೆರೇರಾ ಅವರ ಜೊತೆಯಾಟ ಬ್ರೇಕ್ ಆದ ನಂತರ ಶ್ರೀಲಂಕಾದ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಸ್ಸಾಂಕ್, ಪೆರೇರಾ ಅರ್ಧಶತಕದ ಆಟ ಬಿಟ್ಟರೆ ಮತ್ತಾರು ಸಿಂಹಳೀಯರ ಪರವಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ. ಆಸೀಸ್ನ ಸ್ಟಾರ್ ಸ್ಪಿನ್ನರ್ ಆಡಮ್ ಝಂಪಾ 4 ವಿಕೆಟ್ ಕಿತ್ತರೆ, ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ತಲಾ 2 ವಿಕೆಟ್ ಉರುಳಿಸಿದರು. ಇದರಿಂದ 43.3 ಓವರ್ಗೆ 209 ರನ್ ಗಳಸಿ ಶ್ರೀಲಂಕಾ ಸರ್ವಪತನ ಕಂಡಿತು.
ತಲಾ ಎರಡು ಪಂದ್ಯಗಳನ್ನು ಸೋತಿದ್ದ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾಕ್ಕೆ ಇಲ್ಲಿನ ಏಕಾನಾ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲೇ ಬೇಕಾದ ಒತ್ತಡವಿತ್ತು. ಲಂಕಾದ ಆರಂಭಿಕ ಆಟಗಾರರು ವಿಶ್ವಕಪ್ನಲ್ಲಿ ಕಮ್ಬ್ಯಾಕ್ ಮಾಡುವ ಪ್ರದರ್ಶನವನ್ನು ನೀಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮೈದಾನಕ್ಕಿಳಿದ ಶ್ರೀಲಂಕಾ ಆರಂಭಿಕರಾದ ನಿಸ್ಸಾಂಕ, ಪೆರೇರಾ ಮೊದಲ ಪವರ್ ಪ್ಲೇ ವೇಳೆಗೆ ವಿಕೆಟ್ ನಷ್ಟವಿಲ್ಲದೇ 51 ರನ್ ಕೆಲೆಹಾಕಿದರು. ಮುಂದುವರೆದು ಬ್ಯಾಟಿಂಗ್ ಮಾಡಿದ ಅವರು ಕಾಂಗರೂ ಪಡೆಯ ಸ್ಪಿನ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ಶತಕದ ಜೊತೆಯಾಟ ಪೂರೈಸಿದರು. 125 ರನ್ಗಳ ಪಾಲುದಾರಿಕೆ ಮಾಡಿದ್ದ ಜೋಡಿಯನ್ನು ಆಸಿಸ್ ನಾಯಕ ಕಮಿನ್ಸ್ ಬೇರ್ಪಡಿಸಿದರು. 67 ಬಾಲಗಳನ್ನು ಎದುರುಸಿ 61 ರನ್ ಗಳಸಿದ್ದ ಪಾತುಮ್ ನಿಸ್ಸಾಂಕ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರೆ, ಅವರ ಬೆನ್ನಲ್ಲೇ 78 ರನ್ ಗಳಿಸಿದ್ದ ಕುಸಾಲ್ ಪೆರೇರಾ ಸಹ ಕಮಿನ್ಸ್ ಬಾಲ್ನಲ್ಲಿ ಬೌಲ್ಡ್ ಆದರು.