ಸಿಡ್ನಿ(ಆಸ್ಟ್ರೇಲಿಯಾ):ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆದಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಉಭಯ ತಂಡಗಳ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಆಂಗ್ಲರ ತಂಡದ ಆರಂಭಿಕ ಬ್ಯಾಟರ್ಗಳು ಮತ್ತೊಮ್ಮೆ ಕೈಕೊಟ್ಟಿದ್ದಾರೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೊಗಸಾದ ಶತಕ ಸಿಡಿಸಿರುವ ಜಾನಿ ಬೈರ್ಸ್ಟೋ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಐದು ಟೆಸ್ಟ್ ಪಂದ್ಯಗಳ ಸರಣಿಗಳ ಪೈಕಿ ಈಗಾಗಲೇ ಮೂರು ಪಂದ್ಯಗಳಲ್ಲಿ ಸೋಲುಂಡಿರುವ ಇಂಗ್ಲೆಂಡ್ ಸರಣಿ ಕೈಚೆಲ್ಲಿದೆ. ಇದೀಗ ನಾಲ್ಕನೇ ಟೆಸ್ಟ್ನಲ್ಲೂ ಕಳಪೆ ಪ್ರದರ್ಶನ ಮುಂದುವರೆಸಿರುವ ಕಾರಣ ಸೋಲು ಕಾಣುವುದು ಬಹುತೇಕ ಖಚಿತ ಎಂದೇ ಹೇಳಲಾಗಿತ್ತು. ಆದರೆ, ತಂಡಕ್ಕೆ ಬೆನ್ ಸ್ಟೋಕ್ಸ್(66) ಹಾಗೂ ಜಾನಿ ಬೈರ್ಸ್ಟೋ(103*) ಉತ್ತಮ ಜೊತೆಯಾಟವಾಡಿ ಚೇತರಿಕೆ ನೀಡಿದ್ದಾರೆ.
36 ರನ್ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 4 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡ ಸೋಲು ಕಾಣುವುದು ಪಕ್ಕಾ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು. ಆದರೆ, 5ನೇ ವಿಕೆಟ್ಗೆ ಒಂದಾದ ಸ್ಟೋಕ್ಸ್ ಹಾಗೂ ಬೈರ್ಸ್ಟೋ ಜೋಡಿ ಎದುರಾಳಿ ಬೌಲರ್ಗಳ ಮೇಲೆ ಸವಾರಿ ಮಾಡಿತು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವಾಡಿ ಸಂಕಷ್ಟದಿಂದ ಪಾರು ಮಾಡಿದೆ.
ಸ್ಟೋಕ್ಸ್-ಬೈರ್ಸ್ಟೋ ಆಕರ್ಷಕ ಜೊತೆಯಾಟ
66 ರನ್ಗಳಿಕೆ ಮಾಡಿದ್ದ ಸ್ಟೋಕ್ಸ್ ವಿಕೆಟ್ ಒಪ್ಪಿಸುತ್ತಿದ್ದಂತೆ ಮೈದಾನಕ್ಕಿಳಿದ ವಿಕೆಟ್ ಕೀಪರ್ ಬಟ್ಲರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ, ಬಾಲಂಗೋಚಿಗಳ ಜೊತೆ ಸೇರಿ ಬೈರ್ಸ್ಟೋ ಶತಕ ದಾಖಲಿಸಿದರು. 140 ಎಸೆತಗಳಲ್ಲಿ 3 ಸಿಕ್ಸರ್, 8 ಬೌಂಡರಿ ಸೇರಿದಂತೆ ಅಜೇಯ 103 ರನ್ಗಳಿಕೆ ಮಾಡಿರುವ ಅವರು ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಸದ್ಯ 70 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ ತಂಡ 258 ರನ್ಗಳಿಕೆ ಮಾಡಿದ್ದು, ಇನ್ನೂ 158 ರನ್ಗಳ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ ಉಸ್ಮಾನ್ ಖ್ವಾಜಾ ಅವರ 137 ಹಾಗೂ ಸ್ಟೀವ್ ಸ್ಮಿತ್ ಅವರ 67 ರನ್ಗಳ ನೆರವಿನಿಂದ 416 ರನ್ಗೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಣೆ ಮಾಡಿದೆ.
ಎಲ್ಲರ ಮೆಚ್ಚುಗೆಗೆ ಪಾತ್ರರಾದ ಬೈರ್ಸ್ಟೋ
ಮೂರು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡ ಟೀಕೆಗೆ ಗುರಿಯಾಗಿದೆ. ಆದರೆ ನಾಲ್ಕನೇ ಪಂದ್ಯದಲ್ಲಿ ಬೈರ್ಸ್ಟೋ ಭರ್ಜರಿ ಶತಕ ಸಿಡಿಸುತ್ತಿದ್ದಂತೆ ಪಂದ್ಯ ವೀಕ್ಷಣೆ ಮಾಡಲು ಬಂದಿದ್ದ ಅನೇಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಸಹಆಟಗಾರರು ಅವರಿಗೆ ಪಂದ್ಯ ಮುಕ್ತಾಯದ ಬಳಿಕ ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷವೆಂದರೆ, ಪ್ರಸಕ್ತ ಸಾಲಿನ ಆ್ಯಷಸ್ ಕ್ರಿಕೆಟ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಬ್ಯಾಟರ್ನಿಂದ ಮೂಡಿ ಬಂದಿರುವ ಮೊದಲ ಶತಕ ಇದಾಗಿದೆ.