ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಎರಡು ಟೆಸ್ಟ್ ಪಂದ್ಯಗಳ ಸರಣಿ ಸಮಬಲವಾಗಿದೆ. ಆದರೆ ಈ ಪಂದ್ಯದ ಫಲಿತಾಂಶ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಭಾರತೀಯ ಕ್ರಿಕೆಟ್ ತಂಡ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಇದೀಗ ನಂಬರ್ 1 ಟೆಸ್ಟ್ ತಂಡವಾಗಿ ಹೊರಹೊಮ್ಮಿದೆ.
ಈ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 118 ಅಂಕಗಳೊಂದಿಗೆ ಐಸಿಸಿ ರೇಟಿಂಗ್‌ನಲ್ಲಿ ಟೈ ಆಗಿದ್ದವು. ಆದಾಗ್ಯೂ, ಪುರುಷರ ತಂಡದ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ಟೆಸ್ಟ್ನಲ್ಲೂ ಅಗ್ರ ಸ್ಥಾನ ಹೊಂದಲು ಸಾಧ್ಯವಾಗಿತ್ತು. ಆದರೆ, ರೋಹಿತ್ ಶರ್ಮಾ ಬಳಗವು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತು, ಎರಡನೇ ಪಂದ್ಯ ಗೆಲ್ಲುವ ಮೂಲಕ 1-1ರಿಂದ ಡ್ರಾ ಮಾಡಿಕೊಂಡಿತು.
ಮತ್ತೊಂದೆಡೆ, ಆಸೀಸ್ ತಂಡ ತನ್ನ ತವರು ನೆಲೆದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾರಮ್ಯ ಮೆರೆದಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಪ್ಯಾಟ್ ಕಮಿನ್ಸ್ ನೇತೃತ್ವದ ಕಾಂಗರೂ ಪಡೆ ಎರಡು ಪಂದ್ಯಗಳನ್ನು 2-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದರಿಂದಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲುವು, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ವಿಜಯದ ಜೊತೆಗೆ ಆಸ್ಟ್ರೇಲಿಯಾಕ್ಕೆ ಈಗ ಟೆಸ್ಟ್ ಶ್ರೇಯಾಂಕದಲ್ಲಿ ಮತ್ತೆ ನಂಬರ್ 1 ಪಟ್ಟಕ್ಕೇರಿಸಲು ಸಾಧ್ಯವಾಗಿದೆ.