ನವದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿ 2023ರ 4 ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಸೋಲು ಅನುಭವಿಸಿದೆ. 2 ಪಂದ್ಯಗಳ ಪರಾಭವದ ಬಳಿಕ ಆಸ್ಟ್ರೇಲಿಯಾ ತಂಡ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಮ್ಮದೇ ದೇಶದ ಮಾಧ್ಯಮಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಆಸ್ಟ್ರೇಲಿಯದ ಮಾಧ್ಯಮಗಳು ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರರು ತಮ್ಮದೇ ತಂಡವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಭಾರತ - ಆಸ್ಟ್ರೇಲಿಯಾ ಪಂದ್ಯದ ವೀಕ್ಷಕ ವಿವರಣೆಗಾರ ಮಾರ್ಕ್ ವಾ ಆಸ್ಟ್ರೇಲಿಯಾ ತಂಡವನ್ನು ತೀವ್ರವಾಗಿ ಟೀಕಿಸಿದ್ದಾರೆ. ದೆಹಲಿ ಟೆಸ್ಟ್ ಸೋಲು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದ್ದಾರೆ.
ದೆಹಲಿ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ಉತ್ತಮ ಅವಕಾಶ ಇತ್ತು ಎಂದು ಮಾರ್ಕ್ ವಾ ಹೇಳಿದ್ದಾರೆ. ಆದರೆ, ತಂಡ ಆ ಎಲ್ಲ ಅವಕಾಶಗಳನ್ನು ಕೈ ಚಲ್ಲಿದರು. ಈ ಮೂಲಕ ಸರಣಿಯಲ್ಲಿ ತಮ್ಮ ಸೋಲನ್ನು ಖಚಿತ ಪಡಿಸಿಕೊಂಡರಷ್ಟೇ ಅಲ್ಲ ಮತ್ತೊಮ್ಮೆ ಹೀನಾಯ ಸೋಲು ಅನುಭವಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಆಸ್ಟ್ರೇಲಿಯ ತಂಡ ಸರಣಿಯನ್ನು ಸಮಬಲ ಮಾಡಿಕೊಳ್ಳಲು ಹಾಗೂ ಜಯದ ಹಳಿಗೆ ಮರಳುವುದು ತುಂಬಾ ಕಷ್ಟಕರವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದ ಮಾಧ್ಯಮದೊಂದಿಗೆ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಈ ಅವಮಾನಕರ ಸೋಲಿನಿಂದ ತುಂಬಾ ನಿರಾಶೆ ಮತ್ತು ಬೇಸರವಾಗಿದೆ ಎಂದು ಹೇಳಿದ್ದಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾದ ಸ್ಪೋರ್ಟ್ಸ್ ಬೀಟ್ ಕವರ್ ಮಾಡುವ ಜಾನ್ ರಾಲ್ಫ್ ಅವರು ಟ್ವೀಟ್ ಮಾಡಿ ತಂಡದ ಪ್ರದರ್ಶನವನ್ನು ಟೀಕಿಸಿದ್ದಾರೆ. 'ಹೌದು, ಶಾಟ್ ಆಯ್ಕೆ ಭಯಾನಕವಾಗಿದೆ ಎಂದು ನಾನು ಒಪ್ಪುತ್ತೇನೆ. ಪಿಚ್‌ಗಳನ್ನು ದೂಷಿಸುವುದಿಲ್ಲ, ಭಾರತದಲ್ಲಿ ನಾವು ಸಾಕಷ್ಟು ಉತ್ತಮವಾಗಿಲ್ಲ ಎಂಬ ವಾಸ್ತವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಟ್ವೀಟ್ನಲ್ಲಿ ಹೇಳಿದ್ದಾರೆ.