ನವದೆಹಲಿ:ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುಗಿದ ಬಳಿಕ ಮುಂದಿನ ತಿಂಗಳು ನಡೆಯುವ ಏಕದಿನ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದೆ. ಗಾಯಗೊಂಡು ಟೆಸ್ಟ್ ಸರಣಿಯಿಂದ ದೂರವುಳಿದಿದ್ದ ಆಲ್ರೌಂಡರ್ಗಳಾದ ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ವೇಗಿ ರಿಚರ್ಡ್‌ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರು ಆಟಗಾರರ ಪುನರಾಗಮನದಿಂದ ತಂಡ ಬಲ ಪಡೆದುಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಟೆಸ್ಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ವಿಫಲರಾಗಿರುವ ಪ್ಯಾಟ್ ಕಮಿನ್ಸ್ ಏಕದಿನ ತಂಡಕ್ಕೂ ನಾಯಕರಾಗಿರಲಿದ್ದಾರೆ. ಇತ್ತೀಚೆಗೆ ಏಕದಿನ ಸೇರಿದಂತೆ ಕ್ರಿಕೆಟ್ಗೆ ವಿದಾಯ ಹೇಳಿದ್ದ ಆ್ಯರೋನ್ ಫಿಂಚ್ ತೆರವಾಗಿದ್ದ ನಾಯಕನ ಸ್ಥಾನವನ್ನು ಕಮಿನ್ಸ್ರನ್ನು ತುಂಬಲಿದ್ದಾರೆ. ಇದಲ್ಲದೇ, ಅನುಭವಿ ಬ್ಯಾಟರ್‌ಗಳಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಕೂಡ ತಂಡದಲ್ಲಿದ್ದಾರೆ. ಹೊಡಿಬಡಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ವಾಪಸಾತಿ ತಂಡಕ್ಕೆ ಹೆಚ್ಚಿನ ಬಲ ನೀಡಿದೆ. ಹಿರಿಯರು ಮತ್ತು ಕಿರಿಯರನ್ನೊಳಗೊಂಡ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಹೆಸರಿಸಿದೆ.
ವಿಶ್ವಕಪ್‌ಗೆ ಪೂರ್ವ ತಯಾರಿ:ಇನ್ನು ಏಕದಿನ ವಿಶ್ವಕಪ್‌ಗೆ 7 ತಿಂಗಳು ಬಾಕಿ ಇದ್ದು, ಭಾರತದ ಉಪಖಂಡದಲ್ಲೇ ನಡೆಯುವ ಟೂರ್ನಿಗೆ ಈ ಸರಣಿ ಪೂರ್ವಾಭ್ಯಾಸವಾಗಲಿದೆ. ಆಸ್ಟ್ರೇಲಿಯಾ ಭಾರತದ ನೆಲದಲ್ಲಿ ಸರಣಿ ಆಡುವ ಮೂಲಕ ಇಲ್ಲಿನ ವಾತಾವರಣ ಮತ್ತು ಮೈದಾನದ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಗಲಿದೆ. "ವಿಶ್ವಕಪ್‌ಗೆ ಕೇವಲ ಕೆಲವೇ ತಿಂಗಳುಗಳು ಬಾಕಿಯಿವೆ. ಭಾರತದಲ್ಲಿ ನಡೆಯುವ ಈ ಸರಣಿ ನಮ್ಮ ತಯಾರಿಯಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಗ್ಲೆನ್, ಮಿಚೆಲ್ ಮತ್ತು ರಿಚರ್ಡ್‌ಸನ್ ಅವರು ಉತ್ತಮ ಪ್ರದರ್ಶನ ತೋರುವ ಮೂಲಕ ವಿಶ್ವಕಪ್‌ಗೆ ಸಜ್ಜಾಗಬೇಕಿದೆ ಎಂದು ತಂಡದ ಮುಖ್ಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದರು.