ಮೆಲ್ಬೋರ್ನ್ (ಆಸ್ಟ್ರೇಲಿಯಾ):ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಆಸ್ಟ್ರೇಲಿಯಾ ಶಾಕ್ ನೀಡಿದೆ. ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹಿಂದೆ ಸರಿಯುತ್ತಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಘೋಷಿಸಿದೆ. ಮಹಿಳೆಯರು ಹಾಗೂ ಬಾಲಕಿಯರ ಮೇಲೆ ತಾಲಿಬಾನ್‌ನ ನಿರ್ಬಂಧಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ತಿಳಿಸಿದೆ.
ಇದನ್ನೂ ಓದಿ:ಅಫ್ಘನ್ ಮಹಿಳೆಯರ ಮೇಲೆ ತಾಲಿಬಾನ್ ಕೆಂಗಣ್ಣು.. ನಿರ್ಬಂಧಗಳಿಗೆ ವಿಶ್ವಸಂಸ್ಥೆ ತೀವ್ರ ಕಳವಳ
ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಫೆಬ್ರವರಿಯಲ್ಲಿ ಭಾರತ ಪ್ರವಾಸದ ಕೈಗೊಳ್ಳಲಿದೆ. ಇದರ ನಂತರ ಮಾರ್ಚ್‌ನಲ್ಲಿ ಯುಎಇಯಲ್ಲಿ ಐಸಿಸಿ ಸೂಪರ್ ಲೀಗ್‌ನ ಭಾಗವಾಗಿ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಅಫ್ಘಾನಿಸ್ತಾನ ತಂಡದೊಂದಿಗೆ ಆಡಬೇಕಿತ್ತು. ಆದರೆ, ಮಹಿಳೆಯರು ಮತ್ತು ಯುವತಿಯರ ಮೇಲೆ ತಾಲಿಬಾನ್ ಹೇರುತ್ತಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಕ್ರಿಕೆಟ್ ಆಡಳಿತ ಮಂಡಳಿಯು ಆಸ್ಟ್ರೇಲಿಯಾ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ ಏಕದಿನ ಸರಣಿಯನ್ನು ಕೈಬಿಡಲು ನಿರ್ಧರಿಸಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದ್ದೇನು? 2023ರ ಮಾರ್ಚ್‌ನಲ್ಲಿ ಯುಎಇಯಲ್ಲಿ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಐಸಿಸಿ ಸೂಪರ್ ಲೀಗ್ ಮೂರು ಪಂದ್ಯಗಳ ಪುರುಷರ ಏಕದಿನ ಸರಣಿಯನ್ನು ಇಂತಹ ಸಂದರ್ಭದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಫ್ಘಾನಿಸ್ತಾನ ಸೇರಿದಂತೆ ಜಗತ್ತಿನಾದ್ಯಂತ ಮಹಿಳೆಯರು ಮತ್ತು ಪುರುಷರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಬದ್ಧವಾಗಿದೆ ಎಂದು ಆ ರಾಷ್ಟ್ರದಲ್ಲಿ ಮಹಿಳೆಯರ ಪರಿಸ್ಥಿತಿಗಳ ಸುಧಾರಣೆ ನಿರೀಕ್ಷೆಯಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಸಹಯೋಗ ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಮಹಿಳೆಯರ ವಿರುದ್ಧದ ತಾಲಿಬಾನ್ ನೀತಿಗಳಿಂದಾಗಿ ಅಫ್ಘಾನಿಸ್ತಾನದ ವಿರುದ್ಧ ಕ್ರಿಕೆಟ್ ಆಸ್ಟ್ರೇಲಿಯಾ ಕಠಿಣ ನಿಲುವು ತಳೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2021ರ ನವೆಂಬರ್ನಲ್ಲಿ ಹೋಬರ್ಟ್‌ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಅನಿರ್ದಿಷ್ಟವಾಗಿ ಮುಂದೂಡಿದೆ. ಈಗ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹಿಂದೆ ಸರಿದು ಬಿಸಿ ಮುಟ್ಟಿಸಿದೆ.
ಮಹಿಳೆಯರ ಕೆಲಸಕ್ಕೂ ತಾಲಿಬಾನ್ ನಿಷೇಧ: ಆಗಸ್ಟ್ 2021ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಮರು ವಶ ಪಡಿಸಿಕೊಂಡ ನಂತರ ಮಹಿಳೆಯರ ಹಕ್ಕುಗಳ ಮೇಲೆ ನಿರ್ಬಂಧಿಸಿದೆ. 1990ರ ದಶಕದಲ್ಲಿ ನೋಡಿದ ತಾಲಿಬಾನ್ ಆಡಳಿತಕ್ಕಿಂತ ಈಗ ಮೃದುವಾಗಿರುತ್ತದೆ ಎಂದು ಭರವಸೆ ಹೊಂದಲಾಗಿತ್ತು. ಆದರೆ, ಹೊಸ ಆಡಳಿತದಲ್ಲೂ ಮಹಿಳೆಯರ ಶಿಕ್ಷಣ ಮತ್ತು ಉದ್ಯೋಗಕ್ಕೆ ನಿರ್ಬಂಧ ಹೇರುವುದರೊಂದಿಗೆ ಉದ್ಯಾನವನಗಳು ಮತ್ತು ಜಿಮ್‌ಗಳನ್ನು ಪ್ರವೇಶಿಸುವುದಕ್ಕೂ ಮಹಿಳೆಯರಿಗೆ ಅವಕಾಶವಿಲ್ಲ ಎಂಬ ತಾಲಿಬಾನ್ ಆದೇಶಿಸಿದೆ. ಮಹಿಳೆಯರು ವಿಶ್ವವಿದ್ಯಾಲಯಕ್ಕೆ ಹಾಜರಾಗುವುದು ಮತ್ತು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳಲ್ಲಿ ಕೆಲಸ ಮಾಡುವುದಕ್ಕೆ ತಾಲಿಬಾನ್ ನಿಷೇಧಿಸಿದೆ.
ಮಹಿಳಾ ತಂಡ ಹೊಂದಿರದ ಅಫ್ಘಾನಿಸ್ತಾನ: ಅಫ್ಘಾನಿಸ್ತಾನವು ಮಹಿಳಾ ತಂಡವನ್ನು ಹೊಂದಿರದ ಏಕೈಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸದಸ್ಯ ರಾಷ್ಟ್ರವಾಗಿದೆ. ಜನವರಿ 14ರಿಂದ ಪ್ರಾರಂಭವಾಗುವ ಮಹಿಳಾ ಅಂಡರ್ 19 ಟಿ20 ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಇಲ್ಲ. ಹೀಗಾಗಿ ಮಹಿಳಾ ಕ್ರಿಕೆಟ್‌ಗೆ ಅಫ್ಘಾನಿಸ್ತಾನದ ಬದ್ಧತೆ ಕೊರತೆಯ ಕುರಿತ ಐಸಿಸಿ ಸಿಇಒ ಜೆಫ್ ಅಲ್ಲಾರ್ಡಿಸ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಮಾರ್ಚ್‌ನಲ್ಲಿ ನಡೆಯುವ ಐಸಿಸಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಲ್ಲಾರ್ಡಿಸ್ ಹೇಳಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾ ಓಪನ್ನಿಂದ ಕಾರ್ಲಸ್ ಅಲ್ಕಾರಜ್, ಮರಿನ್ ಸಿಲಿಕ್ ಔಟ್: ಜಾಕೊವಿಚ್ಗೆ ಸ್ನಾಯುಸೆಳೆತ