ಕರ್ನಾಟಕ

karnataka

By

Published : Aug 7, 2023, 1:05 PM IST

ETV Bharat / sports

ವಿಶ್ವಕಪ್​​ಗೆ ಪ್ರಾಥಮಿಕ ತಂಡ ಪ್ರಕಟಿಸಿದ ಆಸಿಸ್​.. ಮಾರ್ಷ್​ ಸಾರಥ್ಯದಲ್ಲಿ ಟಿ20 ಟೀಮ್​​

Australian Squad: ಆರನ್​ ಪಿಂಚ್​ ನಂತರ ಟಿ-20 ತಂಡಕ್ಕೆ ಮಿಚೆಲ್​ ಮಾರ್ಷ್​ ಅವರನ್ನು ನಾಯಕರಾಗಿ ಆಸ್ಟ್ರೇಲಿಯಾ ನೇಮಕ ಮಾಡಿದೆ.

Australian Squad
Australian Squad

ಸಿಡ್ನಿ (ಆಸ್ಟ್ರೇಲಿಯಾ): ಈ ವರ್ಷ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್​ಗೆ ಇನ್ನು ಕೇವಲ ಎರಡು ತಿಂಗಳು ಬಾಕಿ ಇದೆ. ಹೀಗಿರುವಾಗ ಕ್ರಿಕೆಟ್​ ಆಸ್ಟ್ರೇಲಿಯಾ ವಿಶ್ವಕಪ್​ಗೆ ತೆರಳುವ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಸದ್ಯ 18 ಜನ ಆಟಗಾರರ ತಂಡವನ್ನು ಮಾಡಿದ್ದು, ವಿಶ್ವಕಪ್​ ವೇಳೆಗೆ ಇವರಲ್ಲಿ ಮೂವರನ್ನು ಕೈಬಿಟ್ಟು 15 ಜನರನ್ನು ಆಯ್ಕೆ ಮಾಡಿಕೊಳ್ಳಲಿದೆ. ರಚಿಸಿರುವ ತಂಡದಲ್ಲಿ ಕೆಲ ಅಚ್ಚರಿಯ ಆಯ್ಕೆಗಳೂ ನಡೆದಿದೆ.

ತಂಡದಲ್ಲಿ ಇದುವರೆಗೂ ಅಂತಾರಾಷ್ಟ್ರೀಯ ಪಂದ್ಯವನ್ನು ಆಡದ ಅನ್‌ಕ್ಯಾಪ್ಡ್ ಲೆಗ್ ಸ್ಪಿನ್ನರ್ ತನ್ವೀರ್ ಸಂಘ ಅವರಿಗೆ ಸ್ಥಾನ ದೊರೆತಿದೆ. ಹಾಗೇ ಅನನುಭವಿ ಆಲ್‌ರೌಂಡರ್ ಆರನ್ ಹಾರ್ಡಿ ಅಚ್ಚರಿಯ ಸೇರ್ಪಡೆಯಾಗಿದ್ದಾರೆ. ಟೆಸ್ಟ್ ತಾರೆ ಮಾರ್ನಸ್ ಲ್ಯಾಬುಶೇನ್​ ಅವರನ್ನು ಹೊರಗಿಡಲಾಗಿದೆ.

ವಿಶ್ವಕಪ್​ ತಂಡಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​​ ಸಂಸ್ಥೆ (ಐಸಿಸಿ) ಸಪ್ಟೆಂಬರ್​ 28ರ ಒಳಗೆ ಆಟಗಾರರನ್ನು ಅಂತಿಮಗೊಳಿಸ ಬೇಕು ಎಂದಿದೆ. 2023ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಅಕ್ಟೋಬರ್​ 8 ರಂದು ಭಾರತದ ವಿರುದ್ಧ ಚೆನ್ನೈನ ಮೈದಾನದಲ್ಲಿ ಮೊದಲ ಪಂದ್ಯವನ್ನು ಆಡಲಿದೆ.

ಗಾಯಗೊಂಡಿರುವ ಕ್ಯಾಪ್ಟನ್​: ಇತ್ತಿಚೆಗೆ ಮುಕ್ತಾಯವಾದ ಆ್ಯಶಸ್​ನ ಐದನೇ ಪಂದ್ಯದಲ್ಲಿ ನಾಯಕ ಪ್ಯಾಟ್​ ಕಮಿನ್ಸ್ ಮಣಿಕಟ್ಟಿನ ಮುರಿತಕ್ಕೆ ಒಳಗಾಗಿದ್ದಾರೆ. ವಿಶ್ವಕಪ್​ ವೇಳೆಗೆ ಅವರು ಗುಣಮುಖರಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮುಖ್ಯ ಆಯ್ಕೆಗಾರ ಜಾರ್ಜ್​ ಬೈಲಿ ತಿಳಿಸಿದ್ದಾರೆ. ವಿಶ್ವಕಪ್​ಗೂ ಮುನ್ನ ಭಾರತ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಬರಲಿದ್ದು, ಈ ವೇಳೆ ಕಮಿನ್ಸ್​​ ಚೇತರಿಸಿಕೊಳ್ಳುವುದು ಸಹ ಅನುಮಾನವಾಗಿದೆ. ಬೈಲಿ ಕಮಿನ್ಸ್​​ಗೆ 6 ವಾರಗಳ ವಿಶ್ರಾಂತಿಯ ಅಗತ್ಯ ಇದೆ ಎಂದಿದ್ದಾರೆ. ಹೀಗಾಗಿ ನಾಯಕ ಪ್ಯಾಟ್​ ನೇರ ವಿಶ್ವಕಪ್​ನಲ್ಲೇ ಅಡುವ ಸಂಭವವಿದೆ.

ವಿಶ್ವಕಪ್​ಗೆ ಸಿದ್ಧತೆಗಾಗಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮಾಡಲಿದ್ದು, ಅಲ್ಲಿ ಕೆಲ ಪ್ರಯೋಗಗಳನ್ನು ಮಾಡುವ ಚಿಂತನೆಯಲ್ಲಿದೆ. ಬೈಲಿ ಅವರು,"ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿಯೊಂದಿಗೆ ಆಸ್ಟ್ರೇಲಿಯಾ ವಿಶ್ವಕಪ್‌ಗೆ ತಯಾರಿ ನಡೆಸಲಿದೆ. ಆ ಪಂದ್ಯಗಳಲ್ಲಿ ಸಂಘ ಮತ್ತು ಹಾರ್ಡಿ ಪ್ರಭಾವ ಬೀರಲಿದ್ದಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ತಂಡವು ಸಮತೋಲಿತವಾಗಿದೆ ಮತ್ತು 1987, 1999, 2003, 2007 ಮತ್ತು 2015 ರ ಹಿಂದಿನ ಯಶಸ್ಸಿನ ನಂತರ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ಪ್ರಶಸ್ತಿ ಪಡೆದುಕೊಳ್ಳಬಹುದು ಎಂದು ಬೈಲಿ ವಿಶ್ವಾಸದಲ್ಲಿದ್ದಾರೆ.

ಆಸಿಸ್​ ಟಿ20ಗೆ ಮಿಚೆಲ್ ಮಾರ್ಷ್ ಸಾರಥ್ಯ: ಆರನ್ ಫಿಂಚ್ ನಂತರ ಆಸ್ಟ್ರೇಲಿಯಾದ ಟಿ20 ತಂಡದ ಉತ್ತರಾಧಿಕಾರಿ ಮಿಚೆಲ್ ಮಾರ್ಷ್ ಅವರನ್ನು ನೇಮಕ ಮಾಡಲಾಗಿದೆ. 2021 ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ನಾಯಕ ಪಿಂಚ್,​ 2022ರ ಟಿ20 ವಿಶ್ವಕಪ್​ ನಂತರ ನಿವೃತ್ತಿ ಘೋಷಿಸಿದ್ದರು. ಪಿಂಚ್​ ನಂತರ ಆ ಸ್ಥಾನಕ್ಕೆ ಬೇರೆ ನಾಯಕನನ್ನು ನೇಮಿಸಲು ಕ್ರಿಕೆಟ್​ ಆಸ್ಟ್ರೇಲಿಯಾ ತುಂಬಾ ಸಮಯ ತೆಗೆದುಕೊಂಡಿದೆ.

ಜಾರ್ಜ್ ಬೈಲಿ ಅವರು, ''ಮಿಚ್ ಬಹಳ ಹಿಂದಿನಿಂದಲೂ ವೈಟ್-ಬಾಲ್ ಕ್ರಿಕೆಟ್​ ಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವವನ್ನು ನಿಭಾಯಿಸುವ ಕೌಶಲ್ಯವನ್ನು ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿ ಮಾರ್ಷ್ ಟಿ20 ತಂಡದ ನಾಯಕರಾಗಿ​ ತಮ್ಮ ಸಾಮರ್ಥ್ಯವನ್ನು ತೋರಲಿದ್ದಾರೆ" ಎಂದಿದ್ದಾರೆ. ಮಾರ್ಷ್ ಹಿಂದೆ 2010 ರಲ್ಲಿ ನ್ಯೂಜಿಲ್ಯಾಂಡ್​ನಲ್ಲಿ ನಡೆದ ಐಸಿಸಿ ಪುರುಷರ 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾವನ್ನು ಮುನ್ನಡೆಸಿದ್ದರು. ದೇಶೀಯ ಕ್ರಿಕೆಟ್​ನಲ್ಲಿ ಪಶ್ಚಿಮ ಆಸ್ಟ್ರೇಲಿಯಾವನ್ನು ಮುನ್ನಡೆಸುವ ಅನುಭವವನ್ನು ಹೊಂದಿದ್ದಾರೆ.

ಆಫ್ರಿಕಾ ಪ್ರವಾಸದ ತಂಡದಲ್ಲಿ ಆಲ್‌ರೌಂಡರ್ ಆರನ್ ಹಾರ್ಡಿ, ಆರಂಭಿಕ ಬ್ಯಾಟರ್ ಮ್ಯಾಟ್ ಶಾರ್ಟ್ ಮತ್ತು ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಪಾದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಆಡಮ್ ಝಂಪಾ ಮತ್ತು ಮಾರ್ಷ್ ತಂಡದಲ್ಲಿರುವ ಅನುಭವಿ ಆಟಗಾರರಾಗಿದ್ದಾರೆ.

ಆಸ್ಟ್ರೇಲಿಯಾದ ಏಕದಿನ ವಿಶ್ವಕಪ್ ತಂಡ : ಪ್ಯಾಟ್ ಕಮಿನ್ಸ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಸ್ಟೀವ್ ಸಂಘ , ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಡೇವಿಡ್ ವಾರ್ನರ್, ಆಡಮ್ ಝಂಪಾ.

ದಕ್ಷಿಣ ಆಫ್ರಿಕಾ ಪ್ರವಾಸದ ಆಸ್ಟ್ರೇಲಿಯಾ ಟಿ20 ತಂಡ: ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆಂಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಝಂಪಾ.

ಇದನ್ನೂ ಓದಿ:ODI World Cup: ಏಕದಿನ ವಿಶ್ವಕಪ್‌: ಭಾರತಕ್ಕೆ ಕ್ರಿಕೆಟ್‌ ತಂಡ ಕಳುಹಿಸಲು ಒಪ್ಪಿಗೆ ನೀಡಿದ ಪಾಕ್ ಸರ್ಕಾರ

ABOUT THE AUTHOR

...view details