ಮೆಲ್ಬೊರ್ನ್(ಆಸ್ಟ್ರೇಲಿಯಾ):ತೀವ್ರ ಆರ್ಥಿಕ ಬಿಕ್ಕಟ್ಟು ಹಾಗೂ ರಾಜಕೀಯ ಅರಾಜಕತೆಯಿಂದ ಬಳಲುತ್ತಿರುವ ಶ್ರೀಲಂಕಾ ದೇಶಕ್ಕೆ ಆಸ್ಟ್ರೇಲಿಯಾ ಪುರುಷ ಕ್ರಿಕೆಟಿಗರು ಸಹಾಯಹಸ್ತ ಚಾಚಿದ್ದಾರೆ. ಕ್ರಿಕೆಟ್ ಸರಣಿಯಲ್ಲಿ ತಾವು ಗೆದ್ದ ಪ್ರಶಸ್ತಿಯ ಹಣವನ್ನು ದಾನವಾಗಿ ನೀಡಲು ಮುಂದಾಗಿದ್ದಾರೆ. ಕಳೆದ ಜೂನ್-ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ನಡೆದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಆಸೀಸ್ ತಂಡ ಗೆಲುವು ದಾಖಲಿಸಿತ್ತು.
ಶ್ರೀಲಂಕಾದಲ್ಲಿ ಪ್ರವಾಸದಲ್ಲಿ ಆಸೀಸ್ ತಂಡ ಟೆಸ್ಟ್, ಟಿ20 ಪಂದ್ಯಗಳ ಸರಣಿ ಆಡಿತ್ತು. ಈ ಸರಣಿಯಲ್ಲಿ ತಾವು ಗೆದ್ದಿರುವ ಒಟ್ಟು $45,000 ಹಣವನ್ನೀಗ UNICEFಗೆ ನೀಡಿದೆ. ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಸೀಮಿತ ಓವರ್ಗಳ ನಾಯಕ ಆ್ಯರನ್ ಫಿಂಚ್ ಈ ನಿರ್ಧಾರ ಕೈಗೊಂಡಿದ್ದಾರೆ. ಲಂಕಾದ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಇತರೆ ಸೇವೆಗಳಿಗೆ ಇದು ಬಳಕೆಯಾಗಲಿದೆ.