ಸಿಡ್ನಿ:2021ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ನೆಟ್ ಬೌಲರ್ ಆಗಿದ್ದ ಭಾರತೀಯ ಮೂಲದ ನಿವೇತನ್ ರಾಧಾಕೃಷ್ಣನ್ ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ವೆಸ್ಟ್ ಇಂಡೀಸ್ನಲ್ಲಿ 2022ರಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್ಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ 15 ಆಟಗಾರರ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಮುಂದಿನ ವರ್ಷ ಜನವರಿ 14ರಿಂದ ಕೆರಿಬಿಯನ್ ನಾಡಿನಲ್ಲಿ ಕಿರಿಯರ ವಿಶ್ವಕಪ್ ಜರುಗಲಿದೆ. ಈ ಟೂರ್ನಿಯಲ್ಲಿ 16 ತಂಡಗಳು ಭಾಗವಹಿಸಲಿವೆ. 19 ವರ್ಷದ ರಾಧಕೃಷ್ಣನ್ 2021ರ ಐಪಿಎಲ್ನ ಮೊದಲ ಹಂತದಲ್ಲಿ ರಿಕಿ ಪಾಂಟಿಂಗ್ ಕೋಚ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದರು. ತಮ್ಮ ಸ್ಪಿನ್ ಕೌಶಲ್ಯದಿಂದ ನ್ಯೂ ಸೌತ್ ವೇಲ್ಸ್ ಮತ್ತು ತಾಸ್ಮೇನಿಯಾ ಕ್ರಿಕೆಟ್ ಮಂಡಳಿಗಳು ಒಪ್ಪಂದದ ಆಫರ್ ನೀಡಿದರೂ ರಾಧಾಕೃಷ್ಣನ್ ವಿಶ್ವಕಪ್ ಮುಗಿದ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
2013ರಲ್ಲಿ ಭಾರತದಿಂದ ರಾಧಕೃಷ್ಣನ್ ಕುಟುಂಬ ಸಿಡ್ನಿಗೆ ವಲಸೆ ಹೋಗಿದ್ದರು. ನಂತರ ಅವರು ಆಸ್ಟ್ರೇಲಿಯಾ ಅಂಡರ್ 16 ತಂಡದಲ್ಲಿ ಆಡಿದ್ದ ಅವರು ತಂದೆಯ ಪ್ರೋತ್ಸಾಹದ ಮೇರೆಗೆ ಎರಡೂ ಕೈಗಳಲ್ಲಿ ಫಿಂಗರ್ ಸ್ಪಿನ್ ಮಾಡುವುದನ್ನು ಆರಂಭಿಸಿದ್ದರು. ಇನ್ನು ರಾಧಾಕೃಷ್ಣನ್ ಜೊತೆಗೆ ಭಾರತೀಯ ಮೂಲದ ಹರ್ಕಿರತ್ ಬಾಜ್ವಾ ಕೂಡ 15ರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.