ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಕಪ್ ಗೆದ್ದು ಆಸ್ಟ್ರೇಲಿಯಾ ತಂಡ ದಾಖಲೆ ನಿರ್ಮಾಣ ಮಾಡಿದೆ. ಐಸಿಸಿ ನಡೆಸುವ ಎಲ್ಲಾ ಪ್ರತಿಷ್ಠಿತ ಕಪ್ಗಳನ್ನು ಗೆದ್ದ ತಂಡ ಎಂಬ ಖ್ಯಾತಿಗೆ ಆಸಿಸ್ ತಂಡ ಭಾಜನವಾಗಿದೆ. ಒಟ್ಟು ಇದುವರೆಗೆ 9 ಐಸಿಸಿ ಟ್ರೋಫಿಗಳನ್ನು ಕಾಂಗರೂ ಪಡೆ ಗೆದ್ದುಕೊಂಡಿದೆ. 5 ಏಕದಿನ ವಿಶ್ವಕಪ್, ಎರಡು ಚಾಂಪಿಯನ್ಸ್ ಟ್ರೋಫಿ, ಒಂದು ಟಿ20 ವಿಶ್ವಕಪ್ ಮತ್ತು ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ.
ಸತತ ಎರಡು ವರ್ಷಗಳ ಕಾಲ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಲೀಗ್ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪ್ರವೇಶ ಪಡೆದುಕೊಂಡಿದ್ದವು. ಜೂನ್ 7ರಿಂದ ಲಂಡನ್ನ ಓವೆಲ್ ಪಿಚ್ನಲ್ಲಿ ಆರಂಭವಾದ ಫೈನಲ್ನಲ್ಲಿ ಆಸ್ಟ್ರೇಲಿಯಾ ಭಾರತದ ವಿರುದ್ಧ ಕಣಕ್ಕಿಳಿದಿತ್ತು. ಇದರಲ್ಲಿ ಆಸ್ಟ್ರೇಲಿಯಾ ಭಾರತವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದ ಮೆಲುಕು.. ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಆಸಿಸ್ನ್ನು 469 ರನ್ಗೆ ಆಲ್ಔಟ್ ಮಾಡಿತು. ಈ ಇನ್ನಿಂಗ್ಸ್ನಲ್ಲಿ ಟ್ರಾವೆಸ್ ಹೆಡ್ 163, ಸ್ಟೀವ್ ಸ್ಮಿ ತ್ 121, ಅಲೆಕ್ಸ್ ಕ್ಯಾರಿ 48 ಮತ್ತು ವಾರ್ನರ್ 43 ಗಳಸಿ ಭಾರತದ ಬೌಲರ್ಗಳನ್ನು ಕಾಡಿದರು. ಭಾರತದ ಪರ ಸಿರಾಜ್ ನಾಲ್ಕು ವಿಕೆಟ್ ಕಬಳಿಸದರೆ, ಶಮಿ ಮತ್ತು ಠಾಕೂರ್ ತಲಾ ಎರಡು ಹಾಗೂ ಜಡೇಜ ಒಂದು ವಿಕೆಟ್ ಪಡೆದಿದ್ದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಜಿಂಕ್ಯಾ ರಹಾನೆ 89, ಶಾರ್ದೂಲ್ ಠಾಕೂರ್ 51 ಮತ್ತು ಜಡೇಜ 48 ರನ್ ಗಳಿಸಿದ್ದು ಭಾರತ 296 ರನ್ ಕಲೆ ಹಾಕಿತು. ಇದರಿಂದ ಭಾರತ 173 ರನ್ನ ಹಿನ್ನಡೆಯನ್ನು ಅನುಭವಿಸಿತು. ಆಸಿಸ್ನ ನಾಯಕ ಕಮಿನ್ಸ್ 3 ಮತ್ತು ತ್ರಿವಳಿ ವೇಗಿಗಳಾದ ಸ್ಟಾರ್ಕ್, ಬೋಲ್ಯಾಂಡ್, ಗ್ರೀನ್ ತಲಾ ಎರಡು ವಿಕೆಟ್ ಪಡೆದರು. ಲಿಯಾನ್ ಒಂದು ವಿಕೆಟ್ ಕಬಳಿಸಿದರು.
173 ರನ್ನ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕಾಂಗರೂ ಪಡೆಗೆ ಭಾರತದ ಬೌಲಿಂಗ್ ಕಾಡಿತಾದರೂ, ಲಬುಶೇನ್ (41), ಕ್ಯಾರಿ (66) ಮತ್ತು ಸ್ಟಾರ್ಕ್ (41) ಅವರ ಕೊಡುಗೆ ಭಾರತಕ್ಕೆ ಬೃಹತ್ ಮೊತ್ತದ ಗುರಿ ನೀಡಲು ಸಾಧ್ಯವಾಯಿತು. 443 ರನ್ನ ಮುನ್ನಡೆಯಿಂದ ಆಸಿಸ್ ಡಿಕ್ಲೇರ್ ಘೋಷಿಸಿತು.
444 ರನ್ ಗುರಿ ಸಾಧಿಸಲು ಭಾರತ ಬಳಿ ನಾಲ್ಕೂವರೆ ಸೆಷನ್ಗಳಿದ್ದವು. ನಾಲ್ಕನೇ ದಿನದ ಟೀ ಬ್ರೇಕ್ ಮುನ್ನ ಭಾರತ ಬ್ಯಾಟಿಂಗ್ಗೆ ಬಂತು, ನಿನ್ನೆಯೇ (ನಾಲ್ಕನೇ ದಿನ) 164ಕ್ಕೆ 3 ವಿಕೆಟ್ ಕಳೆದುಕೊಂಡಿತ್ತು. ಆದರೆ ಕ್ರೀಸ್ನಲ್ಲಿ ವಿರಾಟ್ ಮತ್ತು ರಹಾನೆ ಇದ್ದದ್ದು ಗೆಲುವಿನ ಭರವಸೆ ತಂದಿತ್ತು. ಆದರೆ ಕೊನೆಯ ದಿನ ಮೊದಲ ಇನ್ನಿಂಗ್ಸ್ನಲ್ಲೇ ಭಾರತ ಸರ್ವ ಪತನ ಕಂಡಿತು. ಇದರಿಂದ ಐಸಿಸಿ ನಡೆಸಿದ ಎಲ್ಲಾ ಕಪ್ ಗೆದ್ದ ತಂಡ ಎಂಬ ಖ್ಯಾತಿಯನ್ನು ಪಡೆಯಬೇಕಿದ್ದ ಭಾರತ ಅವಕಾಶವನ್ನು ಕಳೆದುಕೊಂಡಿತು.
ಇದನ್ನೂ ಓದಿ:WTC Final: ಕಾಂಗರೂ ಪಡೆಗೆ ಒಲಿದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್.. ಎರಡನೇ ಫೈನಲ್ನಲ್ಲೂ ಮುಗ್ಗರಿಸಿದ ಭಾರತ